ಒಬ್ಬ ಆರೋಪಿಯನ್ನು ರಕ್ಷಿಸಲು ಇಷ್ಟೆಲ್ಲ: ಯುಪಿ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ನವದೆಹಲಿ: ಲಖೀಂಪುರ ಖೇರಿ ರೈತರ ಹತ್ಯೆ ಪ್ರಕರಣವನ್ನು ಉತ್ತರ ಪ್ರದೇಶ ನಿರ್ವಹಿಸುತ್ತರುವ ರೀತಿಗೆ ಇತ್ತೀಚಿನ ಕೆಲವು ವಾರಗಳಲ್ಲಿ ಮೂರನೇ ಬಾರಿಗೆ ಸುಪ್ರೀಂ ಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿರುವ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಯಲ್ಲಿನ ಕಳಪೆ ಪ್ರಗತಿಯ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ಸಿಜೆಐ ಎನ್ವಿ ರಮಣ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ನಿರೀಕ್ಷಿಸಿದ ರೀತಿಯಲ್ಲಿ ಇದು ನಡೆಯುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವು ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳುವುದನ್ನು ಬಿಟ್ಟರೆ ತನಿಖೆ ಸ್ಥಿತಿಗತಿ ವರದಿಯಲ್ಲಿ ಬೇರೆ ಏನೂ ಇಲ್ಲ. ನಾವು 10 ದಿನ ಕಾಲಾವಕಾಶ ನೀಡಿದ್ದೆವು. ಲ್ಯಾಬ್ ವರದಿಗಳು ಕೂಡ ಬಂದಿಲ್ಲ. ಇದು ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಮತ್ತು ಯಾವ ಆರೋಪದ ಮೇಲೆ ಬಂಧಿಸಲಾಗಿದೆ ಎಂಬುದನ್ನು ತನಿಖೆ ಸ್ಥಿತಿಗತಿ ವರದಿಯಲ್ಲಿ ಪಟ್ಟಿ ಮಾಡುವಂತೆ ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು.
ಪ್ರಕರಣದಲ್ಲಿ ಎರಡು ಎಫ್‌ಐಆರ್‌ಗಳಿರುವುದು ಆರೋಪಿ ಆಶಿಶ್ ಮಿಶ್ರಾ ರಕ್ಷಣೆಯ ಗುರಿಯನ್ನು ಮಾತ್ರ ಹೊಂದಿದೆ ಎಂದೂ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.
