ದೆಹಲಿಯಲ್ಲಿ ಕ್ಯಾಪ್ಟನ್: ಹೈಕಮಾಂಡ್ನಿಂದ ದೂರ; ಜಿ-23 ನಾಯಕರೊಡನೆ ಚರ್ಚೆ ಸಾಧ್ಯತೆ

ನವದೆಹಲಿ: ಪಂಜಾಬ್ ಸಿಎಂ ಹುದ್ದೆಯಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೆಳಗಿಳಿದ ಬಳಿಕ ಒಂದೆಡೆ ಪಂಜಾಬ್ ಕಾಂಗ್ರೆಸ್ ಸ್ಥಿತಿ ಶೋಚನೀಯ ಎನ್ನಿಸುವ ಮಟ್ಟಕ್ಕಿಳಿದಿದ್ದರೆ, ಇನ್ನೊಂದೆಡೆ ಕ್ಯಾಪ್ಟನ್ ನಡೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.
ಅವಮಾನ ಸಹಿಸಲಾರೆ ಎಂದು ಸಿಎಂ ಹುದ್ದೆ ತ್ಯಜಿಸಿದ ಅಮರೀಂದರ್ ಸಿಂಗ್, ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಿ ಹೇಳದಿದ್ದರೂ ಯಾವುದೇ ಸಾಧ್ಯತೆಗಳನ್ನು ನಿರಾಕರಿಸಿಯೂ ಇರಲಿಲ್ಲ ಎಂಬುದು ಗಮನಾರ್ಹ. ಮೊನ್ನೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದಾರೆ ಎಂಬುದು ಬಹಿರಂಗವಾಗುತ್ತಿದ್ದಂತೆಯೇ ಇನ್ನೊಂದೆಡೆ ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದು ಕಾಕತಾಳೀಯವಂತೂ ಅಲ್ಲ.

ಪಂಜಾಬ್ ಕಾಂಗ್ರೆಸ್ನಲ್ಲಿನ ಬಿಕ್ಕಟ್ಟು ಬಗೆಹರಿಸಲು ಗಾಂಧಿ ಕುಟುಂಬ ಯತ್ನಿಸುತ್ತಿರುವುದರ ನಡುವೆಯೇ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಅಮರೀಂದರ್ ಸಿಂಗ್ ಭೇಟಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಅಮರೀಂದರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದೂ ಸುದ್ದಿ ಹರಡಿತ್ತು. ಆದರೆ ಅದು ಸೌಜನ್ಯದ ಬೇಟಿಯೆಂದು ಅಮರೀಂದರ್ ಆಪ್ತವಲಯ ಹೇಳಿದೆ. ಶಾ ಜೊತೆಗಿನ ಭೇಟಿಯ ವೇಳೆ ರೈತರ ಪ್ರತಿಭಟನೆ ವಿಚಾರ ಚರ್ಚಿಸಿರುವುದಾಗಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಶಾ ಭೇಟಿಯ ಬಳಿಕ ಗುರುವಾರ ಬೆಳಗ್ಗೆ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಬೇಟಿಯಾಗಿ ಚರ್ಚಿಸಿದ್ದಾರೆ. ಪಂಜಾಬ್ ಗಡಿ ಭದ್ರತೆ ವಿಚಾರವಾಗಿ ಅವರು ಧೋವಲ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಮಂಗಳವಾರದಿಂದಲೇ ದೆಹಲಿಯಲ್ಲಿದ್ದರೂ, ಸೋನಿಯಾ ಗಾಂಧಿ ಭೇಟಿಯಾಗದ ಅಮರೀಂದರ್ ಸಿಂಗ್, ಬಿಜೆಪಿಯ ನಾಯಕರನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಂದು ಪ್ರಧಾನಿಯನ್ನೂ ಅವರು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ನ ಜಿ-23 ನಾಯಕರೊಂದಿಗೂ ಅಮರೀಂದರ್ ಸಿಂಗ್ ಚರ್ಚೆಸಲಿದ್ದಾರೆ ಎಂಬ ಸುದ್ದಿಯಿದೆ.
