ಜಿಲ್ಲಾ ಸುದ್ದಿಬಾಗಲಕೋಟೆರಾಜಕೀಯ

ಅ.2 ರಂದು ಯುಕೆಪಿ 3ನೇ ಹಂತದ ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ: ಎಸ್ ಆರ್ ಪಾಟೀಲ್

ಬಾಗಲಕೋಟೆ: ಯುಕೆಪಿ 3ನೇ ಹಂತದ ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಪಕ್ಷಾತೀತ, ಧರ್ಮಾತೀತ, ಸಾಮೂಹಿಕ ನಾಯಕತ್ವದಲ್ಲಿ ಅಕ್ಟೋಬರ್ 2ಗಾಂಧಿ ಜಯಂತಿಯಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ ನಡೆಯಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಹೇಳಿದರು.

ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಪ್ರಭಾ ನದಿಯ ಅನಗವಾಡಿ ಸೇತುವೆಯಿಂದ ಕೃಷ್ಣಾ ನದಿಯ ಕೋರ್ತಿ ಕೋಲ್ಹಾರದ ಸೇತುವೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆಯಡಿಯಲ್ಲಿ ನಾಡಿನ ಖ್ಯಾತ ಸ್ವಾಮೀಜಿಗಳು, ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಯುಕೆಪಿ ಸಂತ್ರಸ್ತರು ಭಾಗಿಯಾಗಲಿದ್ದಾರೆ. ವಿಧಾನಸಭೆ ವಿಧಾನಪರಿಷತ್ ನಲ್ಲಿ ಯುಕೆಪಿ ಯೋಜನೆ ಬಗ್ಗೆ ಧ್ವನಿಯೆತ್ತಲಾಗಿದೆ. ಆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2500 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ.

ಆದರೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿವೇಶನದಲ್ಲಿ ಯುಕೆಪಿ 3ನೇ ಹಂತದ ಯೋಜನೆ ಪೂರ್ಣಗೊಳಿಸಲು ಅಂದಾಜು 60 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ ಎಂದಿದ್ದರು. ಆದರೀಗ ಕೇವಲ 2500 ಕೋಟಿ ಕೊಡುವುದಾಗಿ ಹೇಳಿರೋದನ್ನು ನೋಡಿದರೆ ಈ ಯೋಜನೆ ಪೂರ್ಣಗೊಳಿಸಲು ಇನ್ನು 3 ದಶಕ ಬೇಕಾಗುತ್ತದೆ ಎಂದಾಗುತ್ತದೆ. ತೆಲಂಗಾಣ ಸರ್ಕಾರ ಕಾಲೇಶ್ವರ ಏತ ನೀರಾವರಿ ಯೋಜನೆಯನ್ನು ಕೇವಲ 3 ವರ್ಷದಲ್ಲಿ 1 ಲಕ್ಷ 20ಸಾವಿರ ಕೋಟಿಯಲ್ಲಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದವರೆ ಆದ ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಿದ್ದಾರೆ, ಬಾಗಲಕೋಟೆ ಜಿಲ್ಲೆಯವರಾದ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಿದ್ದಾರೆ. ಇನ್ನೂ ಒಂದುವರೆ ವರ್ಷದಲ್ಲಿ ಯುಕೆಪಿ ಯೋಜನೆ ಪೂರ್ಣಗೊಳಿಸಿದರೆ ಬಿಜೆಪಿ ಬಹುದೊಡ್ಡ ಸಾಧನೆ ಮಾಡಿದಂತಾಗುತ್ತದೆ ಎಂದರು.

ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಿದಾಗ ಸಿದ್ದರಾಮಯ್ಯನವರು ನೀರಾವರಿ ಯೋಜನೆಗೆ ಪ್ರತಿ ವರ್ಷ 10ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಅದರಂತೆ ಐದು ವರ್ಷದಲ್ಲಿ 53 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಲಾಗಿದೆ. ಆದರೆ ಯುಕೆಪಿ ಯೋಜನೆಗೆ ಪ್ರತಿವರ್ಷ 10ಸಾವಿರ ಕೋಟಿ ಕೊಡುವುದಾಗಿ ಹೇಳಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಇನ್ನು ಮೊನ್ನೆ ನಡೆದ ಅಧಿವೇಶನದಲ್ಲಿ ಯುಕೆಪಿ 3ನೇ ಹಂತದ ಯೋಜನೆ ಬಗ್ಗೆ ಚರ್ಚಿಸುವ ವೇಳೆ ಹೋರಾಟ ಮಾಡುವುದಾಗಿ ಹೇಳಿದ್ದೆ.ಅದರಂತೆ ಪಕ್ಷಾತೀತವಾಗಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಎಲ್ಲಾ ಪಕ್ಷದರವರು, ಸಂಘಟನೆಯವರು, ಸಂತ್ರಸ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪಾದಯಾತ್ರೆ ಅನಗವಾಡಿಯಿಂದ ಆರಂಭವಾಗಿ ಕೋರ್ತಿ ಕೋಲ್ಹಾರದ ಸೇತುವೆ ಬಳಿ ಮುಕ್ತಾಯವಾಗಲಿದೆ. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಅವಳಿ ಜಿಲ್ಲೆಯ ಸಂತ್ರಸ್ತರ ಭಾಗಿಯಾಗಲಿದ್ದಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button