
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಬಿಜೆಪಿ ಸಚಿವರು, ಶಾಸಕರು ಮತ್ತು ಸಂಸದರನ್ನು ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಕ್ಷದ ಶಾಸಕರಿಂದ ಅಹವಾಲು ಸ್ವೀಕರಿಸಿದರು.
ಸಿಎಂ ಬೊಮ್ಮಾಯಿ ಗುರುವಾರ ಒಂದೆರೆಡು ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಬೆಳಗಿನಿಂದ ಸಂಜವರೆಗೆ ಇಡಿ ದಿನವನ್ನು ಪಕ್ಷದ ಶಾಸಕರು ಹಾಗೂ ಸಂಸದರ ಭೇಟಿಗೆ ಮುಡುಪಾಗಿಟ್ಟಿದ್ದಾರೆ.
ಪಕ್ಷದ ಶಾಸಕು ಮತ್ತು ಸಂಸದರಿಂದ ಅಹವಾಲು ಸ್ವೀಕಾರ ಕುರಿತು ಸಿಎಂ ಈ ಹಿಂದೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಭರವಸೆ ನೀಡಿದ್ದರು. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಶಾಸಕರು, ಸಂಸದರು ಯಡಿಯೂರಪ್ಪ ಬದಲಿಯಾಗಿ ಪುತ್ರ ವಿಜಯೇಂದ್ರರನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳಬೇಕಾದ ಪರಿಪಾಠ ಬೆಳೆದಿತ್ತು. ಸಿಎಂ ಬೊಮ್ಮಾಯಿ ಕ್ರಮದಿಂದ ಈಗ ಆ ಪರಿಪಾಠಕ್ಕೆ ಬ್ರೇಕ್ ಬಿದ್ದಿದ್ದು, ಪಕ್ಷದ ಶಾಸಕರು ಮತ್ತು ಸಂಸದರು ನೇರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ದೊರೆತಂತಾಗಿದೆ.
ಸಚಿವರಾದ ಆರ್.ಅಶೋಕ್, ಎಸ್.ಅಂಗಾರ, ಶಾಸಕರಾದ ಅಮೃತ ದೇಸಾಯಿ, ಮಸಾಲೆ ಜಯರಾಂ, ಬೆಳ್ಳಿ ಪ್ರಕಾಶ, ಕೃಷ್ಣಪ್ಪ, ಎಸ್.ರಘು, ರವಿ ಸುಬ್ರಹ್ಮಣ್ಯ, ಹೆಚ್.ವಿಶ್ವನಾಥ್, ಮಾಡಾಳು ವಿರೂಪಾಕ್ಷಪ್ಪ, ಉದಯ ಗರುಡಾಚಾರ್, ಸತೀಶ್ ರೆಡ್ಡಿ, ಉಮಾನಾಥ್ ಕೋಟ್ಯಾನ್, ಪ್ರೀತಂ ಗೌಡ ಮತ್ತಿತರರು ಅನುದಾನ ಬಿಡುಗಡೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿದ್ದಾರೆ.



