ಪಂಚಮಸಾಲಿ ಮೀಸಲಾತಿ; ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಉದ್ಯೋಗದ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹಾಗೂ 2ಎ ವರ್ಗಕ್ಕೆ ಸೇರಿಸುವ ಕುರಿತು ಎರಡು ದಿನದೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಿಂದ ‘ ಧರಣಿ ಸತ್ಯಾಗ್ರಹ ‘ ಆರಂಭಿಸುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 48 ಗಂಟೆಯೊಳಗೆ ತನ್ನ ನಿಲುವು ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವಣದಲ್ಲಿ ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ ಆರಂಭಿಸುವುದೆಂದು ತಿಳಿಸಿದರು.
ಅಕ್ಟೋಬರ್ 1 ರಂದು ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್.ಪಟೇಲ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ ಭವನದಲ್ಲಿ ಚಳವಳಿಗಾರರ ಸಮಾವೇಶ ನಡೆಯಲಿದೆ. ಅಂದು ಸರಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೇರಿದಂತೆ ಸಚಿವರು ಬಂದು ಭರವಸೆ ಕೊಟ್ಟರೆ, ತಮ್ಮ ನಿರ್ಧಾರ ಮರುಪರಿಶೀಲನೆ ಮಾಡುವುದಾಗಿ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 15 ರೊಳಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಈಗಾಗಲೇ ಗಡುವು ಮುಗಿದಿರುವ ಕಾರಣ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ ಎಂದರು.
ನಮಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಎಲ್ಲರ ಮೇಲೆ ವಿಶ್ವಾಸವಿದೆ.ಸರಕಾರ ಕೂಡಲೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗುಡುಗಿದರು.
ಹಿಂದುಳಿದ ವರ್ಗಗಳ ಆಯೋಗವು ಕೇಳಿರುವ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆಯೋಗವು ಸರಕಾರಕ್ಕೆ ‘ ಸಕಾರಾತ್ಮಕ ವರದಿ’ ನೀಡುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮಸಮುದಾಯಕ್ಕೆ ಮೀಸಲಾತಿ ಅಗತ್ಯವಿದ್ದು, ಶೈಕ್ಷಣಿಕ,ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ. ಸಿಎಂ ಮೀಸಲಾತಿ ವರದಿ ಪಡೆದುಕೊಂಡಿದ್ದಾರೆ. ಆದರೆ, ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ. ಸೆಪ್ಟಂಬರ್ 15 ರ ಗಡುವು ಸರ್ಕಾರ ಮರೆತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ, ಹಾಲುಮತ ಸಮುದಾಯಗಳಿಗೂ ಮೀಸಲಾತಿ ಕೊಡಿ ಎಂದು ಕೇಳಿದ್ದೇವೆ.ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ.ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದೂ ಅವರು ತಿಳಿಸಿದರು.
