
ಬೆಂಗಳೂರು: ರಾಜ್ಯದಲ್ಲಿ ಹಳ್ಳ ಹಿಡಿದಿರುವ ಡಯಾಲಿಸಿಸ್ ಸೇವೆಯನ್ನು ಸರಿಪಡಿಸಿ ಅತಿಶೀಘ್ರವೇ ಸುಜಜ್ಜಿತ ಮತ್ತು ಸುವ್ಯವಸ್ಥಿತ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ತರಿಕೆರೆ ಶಾಸಕ ಡಿ.ಎಸ್.ಸುರೇಶ್ ಮತ್ತಿತರ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿಯೊಬ್ಬ ಶಾಸಕರು ಹಾಗೂ ವ್ಯಕ್ತಿಯೂ ಆತ್ಮಾವಿಶ್ವಾಸದಿಂದ ಈ ಸೇವೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಸುರೇಶ್, ಡಯಾಲಿಸಿಸ್ ಸೇವಾ ಕೇಂದ್ರಗಳಲ್ಲಿ ರೋಗಿಗಳಿಗೆ ಅವಶ್ಯವಾದ ಔಷಧ ನೀಡಲಾಗುತ್ತಿಲ್ಲ. ಸಂಬಂಧಿಸಿದ ಸಂಸ್ಥೆ ವಿರುದ್ಧ ಕ್ರಮವನ್ನೂ ಕೈಗೊಂಡಿಲ್ಲ. ರೋಗಿಗಳು ಹಣತೆತ್ತು ಔಷಧ ಪಡೆಯುವಂತಾಗಿದೆ. ಇದರಿಂದ ಬಡರೋಗಿಗಳ ಸ್ಥಿತಿ ಶೋಚನೀಯವಾಗಿದೆ. ತಮ್ಮ ಕ್ಷೇತ್ರದಲ್ಲಿ ನಾಲ್ಕು ಡಯಾಲಿಸಿಸ್ ಯೂನಿಟ್ ಗಳ ಪೈಕಿ ಒಂದು ಕೆಟ್ಟುಹೋಗಿದೆ. ಮೂರು ಸರ್ವಿಸ್ ಮಾಡಿಲ್ಲ ಎಂದು ದೂರಿದರು.
ಇದಕ್ಕೆ ದನಿಗೂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಇಡೀ ರಾಜ್ಯದ ಸಮಸ್ಯೆ. ಬಹಳ ತಿಂಗಳಿಂದ ನೆನೆಗುದಿಗೆ ಬಿದ್ದಿದೆ. ಕೂಡಲೇ ಹೊಸ ಟೆಂಡರ್ ಕರೆದು ವ್ಯವಸ್ಥೆ ಸರಿಪಡಿಸಬೇಕಿದೆ ಎಂದರು.
ಉತ್ತರ ಮುಂದುವರಿಸಿದ ಸಚಿವ ಸುಧಾಕರ್, 2016-17 ಹಾಗೂ 2017-18ರಲ್ಲಿ ಆಗಿನ ಸರ್ಕಾರ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಿ ಟೆಂಡರ್ ಕರೆದು ಒಂದು ಸಂಸ್ಥೆಗೆ 56 ಹಾಗೂ ಬಿ.ಆರ್.ಶೆಟ್ಟಿ ಸಂಸ್ಥೆಗೆ 114 ತಾಲೂಕು ಡಯಾಲಿಸ್ ಕೇಂದ್ರಗಳ ಸೇವೆ ಮತ್ತು ನಿರ್ವಹಣೆಯ ಒಪ್ಪಂದ ಮಾಡಿಕೊಂಡಿತ್ತು. ಆರ್ಥಿಕ ನಷ್ಟದ ಕಾರಣ ನೀಡಿದ ಬಿ.ಆರ್.ಶೆಟ್ಟಿ ಸಂಸ್ಥೆ ಕಳೆದ ಏಳೆಂಟು ತಿಂಗಳಿಂದ ಸೇವಾ ಗುಣಮಟ್ಟ ಕಡಿಮೆ ಮಾಡುತ್ತಾ ಹಲವು ಕಡೆ ಸೇವೆಯನ್ನು ಸ್ಥಗಿತಗೊಳಿಸಿದೆ. ಸಂಸ್ಥೆಗೆ ಸಿಬ್ಬಂದಿವೇತನ ಮತ್ತು ಔಷಧವನ್ನು ಸರ್ಕಾರವೇ ಪೂರೈಸಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಹೀಗಾಗಿ ತಿಂಗಳೊಳಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತದೆ ಎಂದರು.
ಸಚಿವರ ಉತ್ತರದಿಂದ ತೃಪ್ತರಾಗದ ಮಹಾಂತೇಶ್, ಶಿವಾನಂದ ಪಾಟೀಲ್, ಮತ್ತಿತರ ಸದಸ್ಯರು ಪಕ್ಷಭೇದ ಮರೆತು, ಡಯಾಲಿಸ್ ಕೇಂದ್ರ ಸಿಬ್ಬಂದಿಗೆ ಕಳೆದ ಏಳೆಂಟು ತಿಂಗಳಿಂದ ವೇತನ ನೀಡದಿರುವ ಪರಿಣಾಮ ರೋಗಿಗಳ ಮೇಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭವಾದ ಮುಖ್ಯವಾದ ಯೋಜನೆ. ಸಂಸ್ಥೆಯ ಸೇವೆಗೆ ಪ್ರತಿಯಾಗಿ ಸರ್ಕಾರ ತಲಾ ಒಬ್ಬರಿಗೆ 1050 ರೂಪಾಯಿ ಪಾವತಿಸುತ್ತಿತ್ತು. ಕಳೆದ ಮೇ ಅಂತ್ಯದವರೆಗೆ ಸಿಬ್ಬಂದಿ ವೇತನವನ್ನು ಸರ್ಕಾರ ಸಂಸ್ಥೆಗೆ ಹಸ್ತಾಂತರಿಸಿದೆ. ಆದರೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಇದು ಮಹತ್ವಾಕಾಂಕ್ಷಿ ಮತ್ತು ಹೆಮ್ಮೆಪಡುವಂತಹ ಒಳ್ಳೇಯ ಯೋಜನೆ, ತ್ವರಿತವಾಗಿ ರೋಗಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆಗೆ ಉತ್ತರಿಸಿದ ಸಚಿವ ಸುಧಾಕರ್, ಟೆಂಡರ್ ಪಡೆದಿರುವ ಸಂಸ್ಥೆಯೊಂದಿಗೆ ತಾಂತ್ರಿಕ ಮತ್ತು ಕಾನೂನು ಸಮಸ್ಯೆಗಳಿದ್ದು ಕೂಡಲೇ ಅದನ್ನು ನಿವಾರಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುದು ಎಂದು ವಿಷಯಕ್ಕೆ ತೆರೆ ಎಳೆದರು.



