Breaking NewsLatestರಾಜಕೀಯರಾಷ್ಟ್ರೀಯ

ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾಜೀನಾಮೆ; ಸಿಧು ಆಟದಲ್ಲಿ ಕ್ಯಾಪ್ಟನ್ ಕೈಬಿಟ್ಟ ಕಾಂಗ್ರೆಸ್

ಅಮೃತ್​ಸರ್: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಶನಿವಾರ ಸಂಜೆ 4.30ಕ್ಕೆ ರಾಜ್ಯಪಾಲರ ಬನ್ವಾರಿಲಾಲ್ ಪುರೋಹಿತ ಅವರನ್ನು ಭೇಟಿಯಾದ ಸಿಂಗ್, ಸಿಎಂ ಹುದ್ದೆಗೆ ತಮ್ಮ ರಾಜೀನಾಮೆ ಸಲ್ಲಿಸಿದರು.

ತುರ್ತು ಶಾಸಕಾಂಗ ಸಭೆಗೂ ಅರ್ಧ ಗಂಟೆ ಮೊದಲೇ ಅಮರಿಂದರ್ ಸಿಂಗ್ ರಾಜೀನಾಮೆ ನಿಡುವುದರೊಂದಿಗೆ, ಆ ಸಭೆಯಲ್ಲಿ ನಡೆಯಬಹುದಾಗಿದ್ದ ಒಟ್ಟಾರೆ ಆಟದ ಚಿತ್ರವೇ ಬದಲಾಗಿ ಹೋಯಿತು.

ರಾಜ್ಯಪಾಲರ ಭೇಟಿಗೆ ಸಮಯ ನಿಗದಿಯಾಗಿರುವುದು ವರದಿಯಾದ ಕೆಲವೇ ಹೊತ್ತಲ್ಲಿಯೇ, ಅವರು ರಾಜೀನಾಮೆ ನೀಡಲಿದ್ದಾರೆ ಎಂಬುದನ್ನು ಅಮರೀಂದರ್ ಸಿಂಗ್ ಪುತ್ರ ಖಚಿತಪಡಿಸಿದ್ದರು.

ರಾಜೀನಾಮೆ ಬಳಿಕ ಅಮರಿಂದರ್ ಸಿಂಗ್ ಮಾತು:
“ನನ್ನ ನಾಯಕತ್ವವನ್ನು ಪ್ರಶ್ನಿಸಲಾಯಿತು.
ನನಗೆ ಮತ್ತೆ ಮತ್ತೆ ಪಕ್ಷದಲ್ಲಿ ಅವಮಾನವಾಯಿತು.
ನಾನು ನನ್ನ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದ್ದೇನೆ.
ಕಾಂಗ್ರೆಸ್ ನಾಯಕತ್ವ ತಾನು ನಂಬುವವರನ್ನೇ ಮುಂದಿನ ಸಿಎಂ ಮಾಡಲಿ.”

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾದ ಬೆನ್ನಲ್ಲೆ ಶನಿವಾರ ಬೆಳಗ್ಗೆ ಅಮರಿಂದರ್ ಸಿಂಗ್ ತಮಗೆ ನಿಷ್ಠರಾಗಿರುವ ಶಾಸಕರೊಂದಿಗೆ ಚರ್ಚೆ ನಡೆಸಿದ್ದರು.

ಸಂಜೆ 5 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಯಬೇಕಿತ್ತು. ಅದರ ನಡುವೆಯೇ ಅಮರಿಂದರ್ ಸಿಂಗ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಕೇಳಿದೆ ಎಂಬ ವದಂತಿಗಳು ಎದ್ದಿದ್ದವು.

ಬಹುತೇಕ ಶಾಸಕರು ನಾಯಕತ್ವ ಬದಲಾವಣೆಗೆ ಪಟ್ಟುಹಿಡಿದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಮರಿಂದರ್ ಸಿಂಗ್ ರಾಜೀನಾಮೆ ಕೇಳಿದೆ ಎಂಬ ಮಾತುಗಳಿದ್ದವು

ಕಾಂಗ್ರೆಸ್​ನ 80 ಶಾಸಕರಲ್ಲಿ 50ಕ್ಕೂ ಹೆಚ್ಚು ಶಾಸಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿತ್ತು.

2022ರ ಫಬ್ರವರಿ ಇಲ್ಲವೆ ಮಾರ್ಚ್​ನಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಸಿಧು ಬೆಂಬಲಿಗ ಶಾಸಕರ ಈ ಒತ್ತಡ ಕಾಂಗ್ರೆಸ್ ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿತ್ತು.

ಈಚಿನ ಬೆಳವಣಿಗೆಗಳಿಂದ ತೀವ್ರ ಸಿಟ್ಟಾಗಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ಈ ಅವಮಾನ ಸಾಕು. ಇದು ಮೂರನೇ ಬಾರಿಗೆ ಹೀಗಾಗುತ್ತಿರುವುದು. ಹೀಗೆ ಅವಮಾನಿಸುತ್ತಿರುವ ಪಕ್ಷದಲ್ಲಿ ನಾನು ಮುಂದುವರಿಯಲಾರೆ ಎಂದು ಸೋನಿಯಾ ಅವರಿಗೆ ಹೇಳಿದ್ದಾರೆನ್ನಲಾಗಿತ್ತು.

ಈವರೆಗೂ ರಾಜೀನಾಮೆಗೆ ಅಮರಿಂದರ್ ಸಿಂಗ್ ಒಪ್ಪಿರಲಿಲ್ಲ. ಇದು ಪಕ್ಷದಲ್ಲಿ ಬಿರುಕು ಇಲ್ಲವೆ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆಯತ್ತ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿತ್ತು. ಹೀಗೇ ಮುಂದುವರಿದಲ್ಲಿ ರಾಜ್ಯಪಾಲರು ರಾಜಕೀಯ ಅಸ್ಥಿರತೆಯ ಕಾರಣ ಹೇಳಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸು ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿತ್ತು.

ಸಂಜೆಯೊಳಗೆ ಏನೂ ನಡೆಯಬಹುದು ಎಂಬ ರಾಜಕೀಯ ಕುತೂಹಲಗಳ ಮಧ್ಯೆಯೇ ಅಮರಿಂದರ್ ಸಿಂಗ್ ಸಿಎಂ ಹುದ್ದೆ ತ್ಯಜಿಸಿದ್ದಾರೆ. ಹೊಸ ಸಿಎಂ ರೇಸ್​ನಲ್ಲಿ ಮೂರು ಹೆಸರುಗಳು ಕೇಳಿಬರುತ್ತಿವೆ. ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಸುನಿಲ್ ಜಾಖರ್ ಮತ್ತು ಪ್ರತಾಪ್ ಸಿಂಗ್ ಬಾಜ್ವಾ ಹಾಗೂ ಬಿಯಾಂತ್ ಸಿಂಗ್ ಮೊಮ್ಮಗ ರವ್​ನೀತ್ ಸಿಂಗ್ ಬಿಟ್ಟು ಇವರಲ್ಲಿ ಒಬ್ಬರು ಸಿಎಂ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಗಳಿವೆ.

ಅಮರಿಂದರ್ ಸಿಂಗ್ ಮತ್ತು ಅವರ ಬೆಂಬಲಿಗರ ಮುಂದಿನ ನಡೆ ಏನೆಂಬುದು ಸದ್ಯದ ಕುತೂಹಲ.

Spread the love

Related Articles

Leave a Reply

Your email address will not be published. Required fields are marked *

Back to top button