
ಬಾಗಲಕೋಟೆ: ನೆಗಡಿ ಕೆಮ್ಮ ಜ್ವರದಂತಹ ಲಕ್ಷಣ, ಜೊತೆಗೆ ಇತರೆ ರೋಗವಿದ್ದರೆ ಆಸ್ಪತ್ರೆಗೆ ಹೋಗಬೇಕಿಲ್ಲ.ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಆನ್ಲೈನ್ ಮೂಲಕವೇ ಚಿಕಿತ್ಸೆ ಪಡೆಯಬಹುದಾಗಿದೆ.ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇಂತಹದ್ದೊಂದು ಆನ್ಲೈನ್ ಚಿಕಿತ್ಸೆ ಆರಂಭವಾಗಿದೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯೊಂದರಲ್ಲಿ ನಿತ್ಯ ನೂರಾರು ರೋಗಿಗಳು ಆನ್ಲೈನ್ ಮೂಲಕವೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆನ್ಲೈನ್ ಚಿಕಿತ್ಸೆ ಹಬ್ ಶುರುವಾಗಿದೆ. ಕೋವಿಡ್ ಬಂದ ಬಳಿಕ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ. ಅದುವೆ ಇ-ಸಂಜೀವಿನಿ. ಇದು ಓಪಿಡಿ ಆನ್ ಲೈನ್ ಆ್ಯಪ್. ಕೋವಿಡ್ ಹರಡುವಿಕೆ ಹಾಗೂ ಜನರ ಅನಾವಶ್ಯಕ ಅಲೆದಾಟ, ಖರ್ಚಿಗೆ ಬ್ರೇಕ್ ಹಾಕೋದು ಮುಖ್ಯ ಉದ್ದೇಶ. ಹೀಗಾಗಿ ಇ-ಸಂಜೀವಿನಿ ಓಪಿಡಿ ಆ್ಯಪ್ ಅನ್ನು ದೇಶದ ಎಲ್ಲ ಕಡೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅದ್ರಲ್ಲಿಯೂ ಬಾಗಲಕೋಟೆ ಜಿಲ್ಲೆ ಒಂದು ಹೆಜ್ಜೆ ಮುಂದೆ ಹೋಗಿ ಒಂದೂವರೆ ತಿಂಗಳಿನಿಂದ ಈಗಾಗಲೇ ಇ-ಸಂಜೀವಿನಿ ಓಪಿಡಿ ಆ್ಯಪ್ ಸಂಪೂರ್ಣವಾಗಿ ಬಳಕೆ ಮಾಡುತ್ತಿದೆ.

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಆ್ಯಪ್ ಬಳಸಲಾಗುತ್ತಿದೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯೊಂದರಲ್ಲಿಯೇ ಪ್ರತಿನಿತ್ಯ ೧೨೦-೧೫೦ ಜನ ಇ-ಸಂಜೀವಿನಿ ಓಪಿಡಿ ಆ್ಯಪ್ ಮೂಲಕ ನುರಿತ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಈ ಮೂಲಕ ಕುಳಿತಲ್ಲಿಯೇ ತಮ್ಮ ರೋಗಗಳಿಗೆ ಸಲಹೆ ಪಡೆಯುತ್ತಿದ್ದಾರೆ.
ಇನ್ನು ಇ-ಸಂಜೀವಿನಿ ಓಪಿಡಿ ಆ್ಯಪ್ ಅಥವಾ ವೆಬ್ ಸೈಟ್ ಅನ್ನು ಬಳಸೋದು ತುಂಬಾನೆ ಸರಳವಾಗಿದೆ. ರಿಜಿಸ್ಟರ್ ಮಾಡಿಕೊಂಡ ಬಳಿಕ ನಿಮ್ಮ ಕಾಯಿಲೆಗೆ ಅನುಗುಣವಾಗಿ ಯಾವ ಸ್ಪೆಶಲಿಸ್ಟ್ ವೈದ್ಯರಿಗೆ ತೋರಿಸಬೇಕು ಅನ್ನೋದನ್ನು ಆ್ಯಪ್ ನಿರ್ಧಾರ ಮಾಡುತ್ತದೆ. ಜೊತೆಗೆ ನೇರವಾಗಿ ನಿಮ್ಮ ಕಾಯಿಲೆಗೆ ಸಂಬಂಧಿಸಿದ ಹಾಗೂ ನುರಿತ ವೈದ್ಯರ ಜೊತೆಗೆ ನಿಮ್ಮನ್ನು ಕನೆಕ್ಟ್ ಮಾಡುತ್ತದೆ. ಹೀಗೆ ಕನೆಕ್ಟ್ ಆದ ವೈದ್ಯರ ಜೊತೆಗೆ ನೀವು ವಿಡಿಯೋ ಮೂಲಕ ಅಥವಾ ಟೆಕ್ಸ್ಟ್ ಮೆಸೆಜ್ ಮೂಲಕ ಸಂವಹನ ಮಾಡಬಹುದು. ನಿಮ್ಮ ಸಮಸ್ಯೆ ಆಲಿಸಿದ ಬಳಿಕ ವೈದ್ಯರು ನಿಮಗೆ ಯಾವ ಔಷಧಿ ತಗೋಬೇಕು, ಯಾವಾಗ ಸೇವಿಸಬೇಕು ಮತ್ತು ಏನೇನು ಪಾಲನೆ ಮಾಡಬೇಕು ಅನ್ನೋದನ್ನ ಔಷಧಿ ಚೀಟಿಯಲ್ಲಿ ತಿಳಿಸ್ತಾರೆ. ನಿಮ್ಮ ಹಾಗೂ ವೈದ್ಯರ ಸಂಭಾಷಣೆ ಮುಗಿದ ಬಳಿಕ ನಿಮ್ಮ ಮೊಬೈಲ್ ಗೆ ಔಷಧಿ ಹಾಗೂ ಸಲಹೆ ಇರುವ ಚೀಟಿ ಬರುತ್ತದೆ. ಇದನ್ನ ನೀವು ಔಷಧಿ ಅಂಗಡಿಗೆ ಹೋಗಿ ತರಬಹುದು. ಇದರಿಂದ ಅನಾವಶ್ಯಕ ಅಲೆದಾಟ ಹಾಗೂ ಖರ್ಚು ತಪ್ಪಿಸಬಹುದು.
ಗ್ರಾಮೀಣ ಪ್ರದೇಶಗಳಲ್ಲಿ ಈ ಆ್ಯಪ್‌ಬಳಕೆ ಮಾಡಿಕೊಳ್ಳಲು ಜನರಿಗೆ ಸಹಾಯ ಆಗುವಂತೆ ಆಯಾ ಗ್ರಾಮಗಳ ಹಾಗೂ ಏರಿಯಾಗಳ ಅಂಗನವಾಡಿ ಕಾರ್ಯಕರ್ತರ ಮೊಬೈಲ್‌ನಲ್ಲಿ ಈ ಅ್ಯಪ್ ಡೌನ್ ಲೋಡ್ ಮಾಡಿ ಇರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯ ಸಹಾಯದ ಮೂಲಕವಾದ್ರೂ ಆ್ಯಪ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ಆ್ಯಪ್ ಬಗ್ಗೆ ಬಾಗಲಕೋಟೆ ಜಿಲ್ಲೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



