Latestಜಿಲ್ಲಾ ಸುದ್ದಿದಾವಣಗೆರೆರಾಜಕೀಯ

ರಾಜಾಹುಲಿ ಹವಾ ಕಡಿಮೆ ಆಗಿಲ್ಲ: ದಾವಣಗೆರೆಯಲ್ಲಿ ಮೊಳಗಿದವು ಬಿಎಸ್ ವೈ ಪರ ಘೋಷಣೆಗಳು…!

ದಾವಣಗೆರೆ: ಸಿಎಂ ಸ್ಥಾನದಿಂದ ಇಳಿದ ಬಳಿಕವೂ ಯಡಿಯೂರಪ್ಪರ ” ಹವಾ” ಕಡಿಮೆಯಾಗಿಲ್ಲ. ಇದಕ್ಕೆ ಒಳ್ಳೆಯ ನಿದರ್ಶನ ದಾವಣಗೆರೆಯಲ್ಲಿ ಇಂದು ಕೇಳಿ ಬಂದ ರಾಜಾಹುಲಿ ಪರ ಘೋಷಣೆಗಳ ಝೇಂಕಾರ.

ಹೌದು. ಇಂದು ರಾತ್ರಿ ಸುಮಾರು ಏಳು ಗಂಟೆಗೆ ನಗರದ ತ್ರಿಶೂಲ್ ಕಲಾಭವನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಯಡಿಯೂರಪ್ಪರ ಪರ ಬಿಜೆಪಿ ಕಾರ್ಯಕರ್ತರು ಘೋಷಣೆ ಹಾಕುವ ಮೂಲಕ ಇನ್ನು ಯಡಿಯೂರಪ್ಪರ ಹವಾ ಇದೆ ಎಂಬುದನ್ನು ತೋರಿಸಿದರು.

ರಾಜಾಹುಲಿಗೆ ಜೈ.. ರಾಜಾಹುಲಿಗೆ ಜೈ… ಯಡಿಯೂರಪ್ಪ ಜಿಂದಾಬಾದ್… ಯಡಿಯೂರಪ್ಪ ಜಿಂದಾಬಾದ್… ಎಂಬ ಘೋಷಣೆ ಕೇಳಿ ಬಂದವು. ದಾವಣಗೆರೆಯ ಸಿಎಂ ಬಸವರಾಜ್ ಬೊಮ್ಮಾಯಿಗೆ ಅಲ್ಲೋ ಇಲ್ಲೋ ಕೇಳುವಂತೆ ಜೈಕಾರ ಹಾಕಿದರೆ, ಉಳಿದದ್ದೆಲ್ಲಾ ರಾಜಾಹುಲಿಯದ್ದೇ ಹವಾ. ಈ ಮೂಲಕ ಬಿಜೆಪಿಯಲ್ಲಿ ಅದರಲ್ಲಿಯೂ ದಾವಣಗೆರೆಯಲ್ಲಿ ಯಡಿಯೂರಪ್ಪ ಅವರ ಶಕ್ತಿ ಏನು ಎಂಬುದು ಮತ್ತೊಮ್ಮೆ ಸಾಬೀತಾಯಿತು‌. ಅರುಣ್ ಸಿಂಗ್ ಅವರಿಗಾಗಲೀ, ನಳಿನ್ ಕುಮಾರ್ ಕಟೀಲ್ ಅವರಿಗೆ ಜೈಕಾರವೇ ಕೇಳಿ ಬರಲಿಲ್ಲ.

ಸಂಜೆ ಏಳು ಗಂಟೆಯ ಹೊತ್ತಿಗೆ ತ್ರಿಶೂಲ್ ಕಲಾಭವನಕ್ಕೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಆಗಮಿಸಿದರು. ಆಗ ಹೆಚ್ಚಾಗಿ ಕೇಳಿಬಂದಿದ್ದೇ ರಾಜಾಹುಲಿ ಹೆಸರು.

ತಳ್ಳಾಟ, ನೂಕಾಟ, ಒಳಹೋಗಲು ಪರದಾಟ…!

ಇನ್ನು ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅರುಣ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ತ್ರಿಶೂಲ್ ಕಲಾಭವನದ ಒಳ ಹೋದರು. ಬಳಿಕ ಪ್ರವೇಶದ್ವಾರದಲ್ಲಿ ಹೈಡ್ರಾಮಾವೇ ನಡೆದು ಹೋಯ್ತು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ಕುಮಾರ್ ಜಾಧವ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಸೇರಿದಂತೆ ಬಿಜೆಪಿಯ ನಾಯಕರು ಒಳ ಹೋಗಲು ಹರಸಾಹಸ ಪಡುವಂತಾಯಿತು. ಕೆಲ ನಾಯಕರು ಒಳಪ್ರವೇಶಿಸಲು ಯತ್ನ ಮಾಡಿದರಾದರೂ ದ್ವಾರದಲ್ಲಿದ್ದ “ಕಾವಲುಗಾರರು” ಒಳ ಬಿಡಲಿಲ್ಲ‌. ಈ ವೇಳೆ ತಳ್ಳಾಟ, ನೂಕಾಟ ಆಯ್ತು. ಒಂದು ಹಂತದಲ್ಲಿ ಕಮಾನು ಬೀಳುತ್ತೇನೋ ಎಂಬ ಪರಿಸ್ಥಿತಿ ನಿರ್ಮಾಣವಾಯ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಸ್ಪಿ ರಿಷ್ಯಂತ್ ಪರಿಸ್ಥಿತಿ ನಿಯಂತ್ರಿಸಿದರು‌. ಡಿಸಿ ಮಹಾಂತೇಶ್ ಬೀಳಗಿ ಆಗಮಿಸಿ ತೇಜಸ್ವಿನಿ ಗೌಡ ಅವರಿಗೆ ಹೋಗಲು ಅನುವು ಮಾಡಿಕೊಡಬೇಕಾಯ್ತು. ಆಮೇಲೆ ಹೊರ ಬಂದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕೈಮುಗಿದು ಯಾಕೆ ಹಿಂಗೆಲ್ಲಾ‌ ಮಾಡುತ್ತೀರಾ. ಹಾಗೆಲ್ಲಾ ಮಾಡಬೇಡಿ ಎಂದು ಕೈಮುಗಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಾಳೆ ನಡೆಯುವ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವ ರೀತಿ ರಣತಂತ್ರ ರೂಪಿಸಬೇಕೆಂಬ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ದಾವಣಗೆರೆಯ ತ್ರಿಶೂಲ್‌ ಕಲಾಭವನದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ರೂಪಿಸಲಾಗಿರುವ ನಗರ ವಿಕಾಸ ಯೋಜನೆಗೆ ಚಾಲನೆ ನೀಡಿ‌ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಎರಡು ದಿನಗಳ ಕಾಲದ ಕಾರ್ಯಕಾರಿಣಿ ನಡೆಯುತ್ತಿದೆ. ಈಗಾಗಲೇ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಾಳಿನ ಕಾರ್ಯಕಾರಿಣಿಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಬಿಜೆಪಿ ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಅತ್ಯಂತ ಮಹತ್ವದ ಕಾರ್ಯಕಾರಿಣಿ ಇದು. ಹಾಗಾಗಿಯೇ ಮಹತ್ವ ಪಡೆದುಕೊಂಡಿದೆ ಎಂದು ಹೇಳಿ ತೆರಳಿದರು.

ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು, ಶಾಸಕರು ಉಪಸ್ಥಿತರಿದ್ದರು

Spread the love

Related Articles

Leave a Reply

Your email address will not be published. Required fields are marked *

Back to top button