ಕಾರ್ಗದ್ದೆ 15 ಲಕ್ಷ ರೂ.ಕಳಪೆ ರಸ್ತೆಯನ್ನು ವಾರದೊಳಗೆ ಸರಿಪಡಿಸದಿದ್ದಲ್ಲಿ ಕಾನೂನಿನ ಹೋರಾಟ: ವಕೀಲ ದತ್ತಾತ್ರೇಯ ನಾಯ್ಕ

ಕಾರವಾರ : ಭಟ್ಕಳ ತಾಲೂಕಿನ ಕಾರ್ಗದ್ದೆಯಲ್ಲಿ 15 ಲಕ್ಷ ರೂ.ವೆಚ್ಛದಲ್ಲಿ ನಿರ್ಮಾಣವಾದ ಕಳಪೆ ಮಟ್ಟದ ರಸ್ತೆಯನ್ನು ಒಂದು ವಾರದೊಳಗೆ ದುರಸ್ಥಿಗೊಳಿಸದಿದ್ದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಕಾರ್ಗದ್ದೆಯಲ್ಲಿ ಕಳಪೆ ಮಟ್ಟದಲ್ಲಿ ಯು.ಜಿ.ಡಿ ಹಾಗೂ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ಸಾರ್ವಜನಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.ಇಲ್ಲಿ ನಿರ್ಮಾಣವಾದ 15 ಲಕ್ಷ ರೂ.ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಾಗಿದ್ದು,ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಂಡ ಎರಡೇ ತಿಂಗಳೊಳಗಾಗಿ ರಸ್ತೆ ಸಂಪೂರ್ಣವಾಗಿ ಒಡೆದು ಹೋಗಿದೆ. ಸರಕಾರದ 15 ಲಕ್ಷ ಅನುದಾನ ಹೊಳೆಯಲ್ಲಿ ಹುಣಸೆ ಹಣ್ಣನ್ನು ಕಿವುಚಿದಂತೆ ಆಗಿದೆ. ಇಲ್ಲಿ ನಡೆದ ಕೋಟಿಗಟ್ಟಲೆ ಅನುದಾನದ ಯು.ಜಿ.ಡಿ ಹಾಗೂ 15 ಲಕ್ಷ ರೂ.ರಸ್ತೆ ಕಾಮಗಾರಿ ಸಾರ್ವಜನಿಕರಿಗೆ ಉಪಯೋಗಕ್ಕಿಂತ ಕುತ್ತನ್ನು ತಂದಿಟ್ಟಿದೆ. ದಿನ ಬೆಳಗಾದರೆ ಸಾರ್ವಜನಿಕರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಕೇಳಿ ಬರುತ್ತಿದೆ ಎಂದು ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಆಕ್ರೋಶವನ್ನು ವ್ಯಕ್ತಪಡಿಸಿದ್ಧು, ಒಂದು ವೇಳೆ ಈ ಬಗ್ಗೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ತಾಲೂಕಾಡಳಿತ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ರಸ್ತೆಯಿಂದ ಸಾರ್ವಜನಿಕರ ಜೀವಕ್ಕೆ ತೊಂದರೆಯಾದಲ್ಲಿ ಇದಕ್ಕೆ ಪರಿಹಾರವನ್ನು ಒದಗಿಸಿ ಕೊಡಬೇಕಾಗುತ್ತದೆ. ಇದು ಸರಕಾರದ ಬೊಕ್ಕಸಕ್ಕೆ ಹಾನಿಯನ್ನುಂಟು ಮಾಡುವ ಕೃತ್ಯವಾಗಿದ್ದು, ಇಷ್ಟೆಲ್ಲಾ ಅವ್ಯವಹಾರಗಳು ನಡೆದರೂ ಕೂಡಾ ಯಾವುದೇ ಅಧಿಕಾರಿ ಅಥವಾ ಜವಾಬ್ದಾರಿಯುತ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.ಈ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಾನೂನಿನ ಮೊರೆ ಹೋಗಲಾಗುವುದು ಎಂದು ಅವರು ಹೇಳಿದರು.
ಒಟ್ಟಾರೆ ತಾಲೂಕಿನಲ್ಲಿ ಇದೇ ರೀತಿಯಲ್ಲಿ ಸರಕಾರದ ಅನುದಾನಗಳು ದುರುಪಯೋಗವಾಗುತ್ತಿದ್ದು,ಕೆಲವು ಗುತ್ತಿಗೆದಾರರು ಯಾವುದೇ ಕಾಮಗಾರಿಗಳು ನಡೆಸದೆ ಬಿಲ್ ಪಾಸ್ ಮಾಡಿಸಿಕೊಂಡು ಸರಕಾರದ ಲಕ್ಷಗಟ್ಟಲೆ ಅನುದಾನವನ್ನು ನುಂಗಿ ನೀರು ಕುಡಿಯುತ್ತಿದ್ದರೆ, ಈ ಹಮೀದ್ ರಂತಹ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ನಡೆಸುವುದರ ಮೂಲಕ ಸರಕಾರದ ಬೊಕ್ಕಸಕ್ಕೆ ಕತ್ತರಿಯನ್ನು ಹಾಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಬರುವ ಅನುದಾನಗಳು ಈ ರೀತಿಯಲ್ಲಿ ಕಂಡವರ ಪಾಲಾಗುತ್ತಿದ್ದರೆ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಪಾಲನ್ನು ಪಡೆದು ತಣ್ಣಗಿರುತ್ತಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.




