ರಾಜ್ಯದಲ್ಲಿ ಸೆ.6 ರಿಂದ ವಾರದಲ್ಲಿ 5 ದಿನ 6 ರಿಂದ 8ನೇ ತರಗತಿ ಆರಂಭ: ಸಚಿವ ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ 6 ರಿಂದ 8ನೇ ತರಗತಿ ವರೆಗೆ ಸೆಪ್ಟೆಂಬರ್ 6 ರಿಂದ ಶಾಲೆ ಆರಂಭಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, 6 ರಿಂದ 8ನೇ ತರಗತಿ ಆರಂಭಕ್ಕೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿವೆ. ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ. ಶೇ.50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಅವಕಾಶವಿರುತ್ತದೆ ಎಂದರು.
ವಾರದಲ್ಲಿ 5 ದಿನ (ಸೋಮವಾರದಿಂದ ಶುಕ್ರವಾರದವರೆಗೆ) ಶಾಲೆ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಉಳಿದ 2 ದಿನ (ಶನಿವಾರ, ಭಾನುವಾರ) ಶಾಲೆ ಸ್ವಚ್ಛಗೊಳಿಸಲು ಅವಕಾಶವಿರುತ್ತದೆ. ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಅಂದರೆ, ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಬಹುದು ಎಂದು ಸರ್ಕಾರ ನಿರ್ಧರಿಸಿದೆ. ಆದರೆ 1ರಿಂದ 5ನೆ ತರಗತಿಯವರೆಗೆ ಶಾಲೆ ಆರಂಭಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಅಂತಹ ಆಲೋಚನೆಗಳಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದರು.
ಕೊರೊನಾ ಸೋಂಕು ರಾಜ್ಯದಲ್ಲೂ ವ್ಯಾಪಿಸುವುದನ್ನು ತಡೆಯುವ ಸಲುವಾಗಿ ಹಲವು ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಓಣಂ ಹಬ್ಬದ ನಂತರ ಕೇರಳದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಸಂಖ್ಯೆ ಅಧಿಕವಾಗುತ್ತಿದ್ದು, ಇದು ಕರ್ನಾಟಕಕ್ಕೂ ಆಘಾತ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೇರಳ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯ 1 ವಾರದ ಕ್ವಾರಂಟೈನ್ ಇರಬೇಕು ಎಂದರು.
ಇನ್ನು ಗಣೇಶೋತ್ಸವ ಆಚರಣ ಸಂಬಂಧ ಮತ್ತೊಂದು ಸಭೆ ನಡೆಸಲಾಗುತ್ತದೆ. ಸೆ.5 ರಂದು ಗಣೇಶೋತ್ಸವ ಆಯೋಜಕರ ಜತೆ ಸಭೆ ನಡೆಸಿ ಚರ್ಚಿಸಲಾಗುತ್ತದೆ. ನಂತರ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
