ಕೊಡಗು: ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದೆ. ಹೆದ್ದಾರಿ, ಕಾಫಿ ತೋಟದ ರಸ್ತೆಗಳಲ್ಲೇ ಆನೆಗಳು ಆಗಾಗ್ಗೆ ಕಂಡುಬರುತ್ತಿದ್ದು ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಭಾನುವಾರ ರಾತ್ರಿ ಕೊಡಗಿನ ಮಾಲ್ದಾರೆ ವ್ಯಾಪ್ತಿಯ ಕಾರ್ಮಿಕರೊಬ್ಬರನ್ನು ಕಾಡಾನೆ ಕೊಂದಿದೆ.
ನಾಗರಹೊಳೆ ಅರಣ್ಯದಿಂದ 25 ಕಿ.ಮೀ ದೂರದವರೆಗೂ ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ತೋಟವನ್ನೇ ಕಾಡು ಮಾಡಿಕೊಂಡಿವೆ. ಆಹಾರ ಹುಡುಕಿಕೊಂಡು ತೋಟದಿಂದ ತೋಟಕ್ಕೆ ಆನೆಗಳು ಅಲೆದಾಡುತ್ತಿವೆ. ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ಕಾಫಿ ತೋಟದ ರಸ್ತೆಗಳಲ್ಲಿ ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಿತ್ತು. ಈ ಸಂದರ್ಭದಲ್ಲಿ ಆನೆಗಳು ನಾಡಿನತ್ತ ಬಂದವು.
ಮಾಲ್ದಾರೆ ವ್ಯಾಪ್ತಿಯ ಘಟ್ಟದ್ದಳ್ಳ ತಮಿಳು ಶಾಲೆ ಬಳಿ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ತನ್ನ ಕೆಲಸ ಮುಗಿಸಿ ಅಂಗಡಿಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾಡಾನೆ ಹಠಾತ್ತನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ 53 ವರ್ಷಗಳ ಕಾರ್ಮಿಕ ಕರಿಯ ಮೃತಪಟ್ಟರು. ಭಾನುವಾರ ರಾತ್ರಿ 10ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆ ಹಾವಳಿ ತಡೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.




