Breaking NewsLatestರಾಜಕೀಯರಾಷ್ಟ್ರೀಯಸುದ್ದಿ
ಜಮ್ಮು- ಕಾಶ್ಮೀರದಲ್ಲಿದ್ದ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಮೆಹಬೂಬ ಮುಫ್ತಿ ಆಗ್ರಹ

ಶ್ರೀನಗರ: ಜಮ್ಮು ಕಾಶ್ಮೀರದ ಜನ ತಾಳ್ಮೆಗೆಟ್ಟರೆ ಇಲ್ಲಿರುವ ಕೇಂದ್ರಾಡಳಿತ ವ್ಯವಸ್ಥೆ ಮಾಯವಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಸಿಎಂ ಮೆಹಬೂಬ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಬಹಿರಂಗ ಸಭೆಯೊಂದರಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲಿ. ಕಾನೂನುಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನವನ್ನು ಕಿತ್ತುಕೊಳ್ಳಲಾಗಿದೆ. ವಿಳಂಬ ಮಾಡದೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಿ ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ಅಫ್ಘಾನಿನಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಭಾರತ ಪಾಠ ಕಲಿಯಬೇಕಿದೆ. ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಲ್ಲಿ ಗಡಿಯಾಚೆಗಿನ ದೇಶಗಳ ಜೊತೆ ಮಾತುಕತೆ ಆರಂಭಿಸಿದಂತೆ ಪ್ರಸಕ್ತ ಆಡಳಿತದಲ್ಲಿರುವ ಸರ್ಕಾರವೂ ಜನರ ಹಿತಾಸಕ್ತಿಗೆ ತಕ್ಕಂತೆ ಆಡಳಿತ ನಡೆಸಲಿ ಎಂದು ಕಿವಿಮಾತು ಹೇಳಿದ್ದಾರೆ.
