Breaking NewsLatestರಾಜಕೀಯರಾಜ್ಯ

ರೇಸ್​ವ್ಯೂ ಕಾಟೇಜ್​ಗೆ ಶಿಫ್ಟ್ ಆಗಲಿದ್ದಾರೆ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವಾಸಸ್ಥಾನವನ್ನು ಆರ್.ಟಿ.ನಗರದ ತಮ್ಮ ಸ್ವಂತ ನಿವಾಸದಿಂದ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ಬಂಗಲೆಗೆ ಸ್ಥಳಾಂತರಿಸಲು ತೀರ್ಮಾನಿಸಿದ್ದಾರೆ.

ಹಾಲಿ ಉನ್ನತ ಶಿಕ್ಷಣ ಸಚಿವ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿದ್ದ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್​ನ್ನು ಹಿಂಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ಆರ್.ಟಿ.ನಗರ ನಿವಾಸಕ್ಕೆ ಸಾರ್ವಜನಿಕರ ಭೇಟಿಯಿಂದಾಗಿ ಜನದಟ್ಟಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ತಾತ್ಕಾಲಿಕವಾಗಿ ಕುಮಾರಕೃಪ ಅತಿಥಿಗೃಹದಿಂದ ಒಂದೆರಡು ದಿನ ಕಾರ್ಯನಿರ್ವಹಿಸಿದ್ದರು. ಆದರೆ ಅದನ್ನು ಸ್ಥಗಿತಗೊಳಿಸಿ ಮತ್ತೆ ಆರ್.ಟಿ.ನಗರ ನಿವಾಸವನ್ನೇ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದಾರೆ.

ಸಚಿವ ಅಶ್ವತ್ಧನಾರಾಯಣ ಸರ್ಕಾರಿ ಬಂಗಲೆ ತೆರವುಗೊಳಿಸಿದ ನಂತರ ನೂತನವಾಗಿ ಹಂಚಿಕೆಯಾಗಿರುವ ರೇಸ್ ಕೋರ್ಸ್ ರಸ್ತೆ ನಿವಾಸಕ್ಕೆ ಮುಖ್ಯಮಂತ್ರಿ ಅವರು ಶೀಘ್ರವೇ ಸ್ಥಳಾಂತರಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಉನ್ನತ ಮೂಲಗಳು ತಿಳಿಸಿವೆ. ಸಚಿವ ಅಶ್ವತ್ಥನಾರಾಯಣಗೂ ಮುನ್ನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾ.ರಾ.ಮಹೇಶ್ ಅವರಿಗೆ ಹಂಚಿಕೆ ಮಾಡಲಾಗಿತ್ತು.

ಸಾರ್ವಜನಿಕ ಸಂಪರ್ಕ, ಅಹವಾಲು ಸ್ವೀಕಾರದಂತಹ ಕಾರ್ಯಗಳಿಗೆ ರೇಸ್ ಕೋರ್ಸ್ ರಸ್ತೆ ಬಂಗಲೆಯನ್ನು ಉಪಯೋಗಿಸಿದರೆ, ಅಧಿಕೃತಸಭೆ, ನಿಯೋಗ ಭೇಟಿ, ಜನಸ್ಪಂದನದಂತಹ ಕಾರ್ಯಗಳನ್ನು ಗೃಹ ಕಚೇರಿ ಕೃಷ್ಣಾದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದಿದೆ.

ಮುಖ್ಯಮಂತ್ರಿಯಾದ ಬಳಿಕ ಆರ್.ಟಿ.ನಗರ ನಿವಾಸದ ಬಳಿ ಹೆಚ್ಚಿನ ಜನರು ಭೇಟಿ ನೀಡುತ್ತಿರುವುದರಿಂದ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿತ್ತು. ಅಲ್ಲದೆ ಜನದಟ್ಟಣೆಯಿಂದ ಆಸುಪಾಸಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ತಾತ್ಕಾಲಿಕವಾಗಿ ಕುಮಾರಕೃಪ ಅತಿಥಿಗೃಹ ಮೂಲಕ ಕಾರ್ಯನಿರ್ವಹಿಸಿದ್ದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಕೂಡಲೇ ಗುಂಡಿಗಳಿಂದ ಹದಗೆಟ್ಟಿದ್ದ ಆರ್.ಟಿ.ನಗರದ ನಿವಾಸದ ಬಳಿಯ ಜಯಮಹಲ್ ನಿಂದ ಎಲ್ಲಾ ಸಂಪರ್ಕ ರಸ್ತೆಗಳಿಗೆ ರಾತ್ರೊರಾತ್ರಿ ಡಾಂಬರೀಕರಣ ಮಾಡಲಾಗಿತ್ತು. ಬಳ್ಳಾರಿ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ತೆರೆವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇನ್ನು ಗೃಹ ಕಚೇರಿ ಕೃಷ್ಣಾಗೆ ಹೊಂದಿಕೊಂಡಿರುವ ಕಾವೇರಿ ನಿವಾಸವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನೂ ತೆರೆವುಗೊಳಿಸಿಲ್ಲ. ಇದಕ್ಕೆ ಕೆಲಕಾಲ ಸಮಯಾವಕಾಶ ಇರುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದಿಳಿದ ಬಳಿಕವೂ ಕಾವೇರಿ ಬಂಗಲೆಯನ್ನು ಖಾಲಿ ಮಾಡಿರಲಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button