ಮೇಕೆದಾಟು ವಿಚಾರದಲ್ಲಿ ಯಾರಿಗೂ ಬಗ್ಗುವುದಿಲ್ಲ: ಗೋವಿಂದ ಕಾರಜೋಳ

ದಾವಣಗೆರೆ: ಮೇಕೆದಾಟು ವಿಚಾರದಲ್ಲಿ ಕಾನೂನು ರೀತಿಯ ಎಲ್ಲಾ ಪ್ರಕ್ರಿಗಳು ಆರಂಭವಾಗಿವೆ. ನಮ್ಮ ಪಾಲಿನ ನೀರನ್ನ ನಾವು ಬಳಕೆ ಮಾಡಿಕೊಳ್ಳಲು ಯಾವುದೇ ರೀತಿಯ ತೊಂದರೆ ಇಲ್ಲ. ತಮಿಳು ನಾಡಿನವರು ವಿನಾಕಾರಣ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ತಾಂತ್ರಿಕ ಪರಿಣಿತರ ತಂಡದಿಂದ ಮೇಕೆದಾಟು ವಿವಾದ ಎದುರಿಸುತ್ತೇವೆ. ನಮ್ಮ ರಾಜ್ಯದ ನೀರನ್ನು, ನಮ್ಮ ಭೂಮಿಯನ್ನ ಕಬಳಿಸಲಿಕ್ಕೆ ಹೊಂಚುಹಾಕಿದ್ರೆ ನಾವು ಸುಮ್ಮನೆ ಇರಲು ಆಗದು. ಅಡೆತಡೆ ಮಾಡುವುದನ್ನು ಮುಂದುವರಿಸಿದರೆ ಕರ್ನಾಟಕ ರಾಜ್ಯ ಸರ್ಕಾರ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ನೆಲ ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡ್ತಿವಿ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಕಳಸಾ ಬಂಡೂರಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳಸಾ ಬಂಡೂರಿಯಲ್ಲಿ 13 ಟಿಎಂಸಿ ಪಾಲು ನೀರಿದೆ. ಅದನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ನಾವು ಸಿದ್ದರಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಪಿಐಎಲ್ ಇದೆ. ಅರಣ್ಯ ಇಲಾಖೆ ಅನುಮತಿ ಸಿಕ್ಕಿದೆ. ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದೆ. ಆದಷ್ಟು ಬೇಗನೆ ಈ ಯೋಜನೆ ಆರಂಭಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.




