ಶ್ರೀ ಮಹಾಮಾಯಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ

ಕಾರವಾರ : ವರ್ಷದ ಪ್ರಥಮ ಜಾತ್ರೆ ಎಂದೇ ಕರೆಯುವ ಕಾರವಾರ ತಾಲೂಕಿನ ಕದ್ರಾದ ಶ್ರೀ ಮಹಾಮಾಯಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಕೋವಿಡ್ ನಿಂದಾಗಿ ಕಳೆದ ಎರಡು ವರ್ಷ ಧಾರ್ಮಿಕ ಸಂಪ್ರದಾಯ ಪೂರ್ಣಗೊಳಿಸುವ ಮೂಲಕ ಮಹಾಮಾಯಾ ದೇವಿಯ ವಾರ್ಷಿಕ ಉತ್ಸವ ನಡೆಸಲಾಗಿತ್ತು. ಆದರೆ ಪ್ರಸ್ತುತ ವರ್ಷ ಉತ್ಸವ ಸಹಸ್ರಾರು ಭಕ್ತರ ಆಗಮನದೊಂದಿಗೆ ಅದ್ದೂರಿಯಾಗಿ ಜರುಗಿತು. ಕಾರವಾರ ತಾಲೂಕಿನ ಕದ್ರಾ ಗ್ರಾಮ ಪಂಚಾಯತ ಭಾಗದಲ್ಲಿರುವ ಶಿಂಗೇವಾಡಿಯಲ್ಲಿ ಶ್ರೀ ಮಹಾಮಾಯಾ ದೇವಿಯ ದೇವಸ್ಥಾನವಿದೆ. ಆದರೆ ವಾರ್ಷಿಕ ಜಾತ್ರಾ ಮಹೋತ್ಸವ ಮಾತ್ರ ಕದ್ರಾ ಮಾರುಕಟ್ಟೆ ಸಮೀಪದ ಗದ್ದುಗೆಯಲ್ಲಿ ಜರುಗುತ್ತದೆ. ಉತ್ಸವದ ದಿನ ಬೆಳಿಗ್ಗೆ ಶಿಂಗೇವಾಡಿ ದೇವಸ್ಥಾನದಿಂದ ಶ್ರೀ ಮಹಾಮಾಯಾ ದೇವಿಯ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಯ ಮೂಲಕ ಗದ್ದುಗೆಗೆ ತರಲಾಗುತ್ತದೆ.
ಮಂಗಳವಾರ ಗದ್ದುಗೆ ಏರಿದ ಶ್ರೀ ಮಹಾಮಾಯಾ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು.ಹೂವು, ತೆಂಗು, ಬಾಳೆಹಣ್ಣು, ಉಡಿ ಸೇರಿದಂತೆ ಇನ್ನಿತರ ಸೇವೆಗಳನ್ನು ಭಕ್ತರು ಅರ್ಪಿಸಿದರು. ಕೆಲ ಭಕ್ತರು ಹರಕೆಯಂತೆ ತುಲಾಭಾರ ಸೇವೆ ಸಲ್ಲಿಸಿದರು. ಮಂಗಳವಾರ ರಾತ್ರಿಯೂ ಸಹಸ್ರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.ಬುಧವಾರ ಸಂಜೆ ಮತ್ತೆ ಪಲ್ಲಕ್ಕಿ ಮೆರವಣಿಗೆ ಮೂಲಕವೇ ಶ್ರೀ ದೇವಿಯ ಮೂರ್ತಿಯನ್ನು ಶಿಂಗೇವಾಡಿಯಲ್ಲಿರುವ ದೇವಸ್ಥಾನಕ್ಕೆ ಸಾಗಿಸಲಾಯಿತು.
ಶ್ರೀ ಮಹಾಮಾಯಾ ದೇವಿಯ ಜಾತ್ರಾ ಮಹೋತ್ಸವದಿಂದಲೇ ಉಳಿದ ಎಲ್ಲ ದೇವಸ್ಥಾನಗಳ ಜಾತ್ರೆಗಳು ಆರಂಭಗೊಳ್ಳುತ್ತವೆ. ಹೀಗಾಗಿ ಕದ್ರಾ ಮಹಾಮಾಯಾ ದೇವಿಯ ಜಾತ್ರೆ ವರ್ಷದ ಪ್ರಥಮ ಜಾತ್ರೆ ಎಂದೇ ಕರೆಯುತ್ತಾರೆ.

