ಖಾಸಗೀತನಕ್ಕೆ ಗೌರವ ನೀಡಿ ಎಂದ ವಿರಾಟ್!

ಪರ್ತ್: ವಿರಾಟ್ ಕೊಹ್ಲಿ ಕೋಪಗೊಂಡಿದ್ದಾರೆ. ತಮ್ಮ ಆಕ್ರೋಶವನ್ನು ಇನ್ಸ್ಟಾಗ್ರಾಂ ಮೂಲಕ ಹೊರಹಾಕಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯವನ್ನಾಡಲು ರೋಹಿತ್ ಪಡೆ ಪರ್ತ್ನ ಖಾಸಗಿ ಹೊಟೇಲ್ನಲ್ಲಿ ತಂಗಿತ್ತು.
ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ತೆರಳಿದ್ದ ವೇಳೆ ಯಾರೋ ಒಬ್ಬರು ಹೋಟೆಲ್ನಲ್ಲಿ ವಿರಾಟ್ ಕೊಹ್ಲಿಗೆ ನೀಡಲಾಗಿದ್ದ ಕೋಣೆಯೊಳಗೆ ಹೋಗಿದ್ದಾರೆ. ಅಷ್ಟೇ ಅಲ್ಲಾ, ಕೊಹ್ಲಿಯ ಕೋಣೆ ಹೇಗಿದೆ, ಕೋಣೆಯೊಳಗೆ ಏನಿದೆ? ಎಂಬುದನ್ನೆಲ್ಲಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ಕೋಪಗೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ವಿಡಿಯೋ ಪೋಸ್ಟ್ ಮಾಡುವುದರ ಜತೆಗೆ ‘ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನನ್ನ ನೋಡಬೇಕು, ಮಾತನಾಡಿಸಬೇಕು, ಭೇಟಿಯಾಗಬೇಕೆಂಬ ಬಯಕೆ ಇರುವುದು ಸಹಜ. ಅಭಿಮಾನಿಗಳ ಈ ಭಾವನೆ ನನಗೆ ಅರ್ಥವಾಗುತ್ತದೆ. ಹೀಗಾಗಿ ಅಭಿಮಾನಿಗಳ ಭಾವನೆಗೆ ನಾನು ಗೌರವ ನೀಡುತ್ತೇನೆ. ಆದರೆ ಈ ವಿಡಿಯೋ ನನ್ನ ಖಾಸಗೀತನಕ್ಕೆ ಧಕ್ಕೆ ತರುತ್ತಿದೆ. ನನ್ನ ವೈಯಕ್ತಿಕ ಕೊಠಡಿಯಲ್ಲೇ ನನಗೆ ಪ್ರೈವಸಿ ಇಲ್ಲ ಎಂದ ಮೇಲೆ ನನಗೆ ವೈಯಕ್ತಿಕ ಸಮಯ ಎಲ್ಲಿ ಸಿಗುತ್ತದೆ. ದಯವಿಟ್ಟು ನನ್ನ ಖಾಸಗಿ ವಿಚಾರಕ್ಕೆ ಗೌರವ ನೀಡಿ’ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿಯ ಈ ಪೋಸ್ಟ್ಗೆ ಪತ್ನಿ ಅನುಷ್ಕಾಟ ಶರ್ಮಾ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅನೇಕ ಕ್ರಿಕೆಟಿಗರು ಕೂಡ ಕೊಹ್ಲಿ ಪರ ಮಾತನಾಡಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿ ಇದು ಸ್ವೀಕಾರ್ಯವಾದ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

