Uncategorizedಜಿಲ್ಲಾ ಸುದ್ದಿ

ವಿದ್ಯುತ್ ಸ್ಪರ್ಶದಿಂದ ಕಾರ್ಮಿಕರ ಸಾವಿಗೆ ನ್ಯಾಯವಿಲ್ಲವೇ?: ಪ್ರಾಣಕ್ಕೆ ಕುತ್ತಾಗುತ್ತಿರುವ ಅಲ್ಯುಮಿನಿಯಂ ಏಣಿಗಳು!

ವರದಿ: ಕಿರುಗುಂದ ರಫೀಕ್

ಚಿಕ್ಕಮಗಳೂರು: ಅಲ್ಯುಮಿನಿಯಂ ಏಣಿ ಬಳಸುವಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಬಲಿಯಾಗುವ ದಾರುಣ ಘಟನೆಗಳು ಮಲೆನಾಡಿನಲ್ಲಿ ಆಗಾಗ ಸಂಭವಿಸುತ್ತಲೇ ಇದೆ.

ಕಾಫಿ ತೋಟಗಳಲ್ಲಿ ಹಲವು ವರ್ಷಗಳಿಂದ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಕಾರ್ಮಿಕರು ರೈತರು ಬಲಿಯಾಗಿರುವುದಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದರೂ ಈ ಬಗ್ಗೆ ಮುನ್ನೆಚ್ಚರಿಕೆಗಾಗಿ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿವೆ.

ತೋಟಗಳಲ್ಲಿ ಮರಕಸಿ ಮಾಡಲು, ಕಾಳುಮೆಣಸು ಕೊಯ್ಯಲು, ಕೀಟನಾಶಕ ಸಿಂಪಡಿಸಲು ಈ ಅಲ್ಯುಮಿನಿಯಂ ಏಣಿಯನ್ನು ಬಳಸಲಾಗುತ್ತದೆ. ಇದನ್ನು ಕಾರ್ಮಿಕರು ಹೆಗಲಿಗೆ ಹಾಕಿಕೊಂಡು ಅತ್ತಿತ್ತ ಸಂಚರಿಸುವಾಗ ತೋಟದ ನಡುವೆ ಕಂಬಗಳಲ್ಲಿ ಹಾದು ಹೋಗುವ ವಿದ್ಯುತ್ ತಂತಿಮಾರ್ಗಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿದರೆ ಮುಗಿದೇ ಹೋಯ್ತು. ವಿದ್ಯುತ್ ಹರಿದು ಏಣಿ ಹಿಡಿದಾತ ತಕ್ಷಣವೇ ಮೃತಪಟ್ಟಿರುತ್ತಾನೆ.

ಅಲ್ಯುಮಿನಿಯಂ ಬದಲಿಗೆ ಫೈಬರ್ ಅಥವಾ ರಬ್ಬರ್ ನಂತಹ ವಿದ್ಯುತ್ವಾಹಕವಲ್ಲದ ವಸ್ತುಗಳಿಂದ ಏಣಿಗಳು ತಯಾರಾಗಬೇಕು. ಇಲ್ಲವೇ ಅಲ್ಯುಮಿನಿಯಂ ಏಣಿಗೇ ಕವಚವಾಗಿ ಫೈಬರ್ ಅಥವಾ ರಬ್ಬರ್ ಅಳವಡಿಸಬೇಕು. ಆಗ ತಂತಿ ತಗುಲಿದರೂ ವಿದ್ಯುತ್ ಸ್ಪರ್ಶವಾಗುವುದನ್ನು ತಪ್ಪಿಸಬಹುದು.

ಹಾಗೆಯೇ ಇಲ್ಲಿ ವಿದ್ಯುತ್ ಪ್ರಸರಣ ಇಲಾಖೆಯ ಹೊಣೆಗಾರಿಕೆಯೂ ಇದೆ. ವಿದ್ಯುತ್ ತಂತಿಗಳು ಅಲ್ಲಲ್ಲಿ ನೆಲಮಟ್ಟಕ್ಕೆ ಜೋತುಬಿದ್ದು ಅಥವಾ ಕೆಲವೆಡೆ ವಿದ್ಯುತ್ ಕಂಬಗಳು ಬಾಗಿಕೊಂಡಿದ್ದಾಗಲೂ ಇಂತಹ ಅವಘಡಗಳು ಸಂಭವಿಸಿರುವ ನಿದರ್ಶನಗಳಿವೆ. ವಿದ್ಯುತ್ ಕಂಬಗಳನ್ನು ಇನ್ನಷ್ಟು ಎತ್ತರಿಸುವುದು ಅಥವಾ ತೋಟಗಳಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳಿಗೆ ಪೈಪ್ ಅಥವಾ ಸೂಕ್ತ ಕವಚಗಳನ್ನು ಅಳವಡಿಸುವುದು ಅಥವಾ ಇನ್ನಷ್ಟು ವೈಜ್ಞಾನಿಕವಾಗಿ ನೆಲಮಾರ್ಗದಲ್ಲಿ ವಿದ್ಯುತ್ ಪೂರೈಕೆಯಂತಹ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಉಂಟಾಗಬಹುದಾದ ಯಾವುದೇ ರೀತಿಯ ವಿದ್ಯುತ್ ಸ್ಪರ್ಶದ ಅವಘಡಗಳನ್ನು ತಪ್ಪಿಸಬಹುದು. ಹಾಗೆಯೇ ಎಷ್ಟೋ ಮಂದಿಯ ಪ್ರಾಣಗಳನ್ನೂ ಉಳಿಸಬಹುದು.

——————
ಅಲ್ಯುಮಿನಿಯಂ ಏಣಿಗಳ ತಯಾರಿಕೆ ನಿಷೇಧವಾಗಬೇಕು
-ಶಾಸಕ ಎಂ.ಪಿ.ಕುಮಾರಸ್ವಾಮಿ
ಏಣಿ ತಯಾರಿಕೆ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅದರ ತಯಾರಿಕೆಯನ್ನೇ ನಿಷೇಧಿಸಬೇಕು. ಆಗ ಮಾತ್ರ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ದೂರಿದರು.

ಅವರು ಮಂಗಳವಾರ ಲೈವ್ ಕನ್ನಡ ವರದಿಗಾರರೊಂದಿಗೆ ಮಾತನಾಡಿ, ತೋಟಗಳಲ್ಲಿ ಅಲ್ಯುಮಿನಿಯಂ ಏಣಿ ಬಳಕೆ ಅಪಾಯಕಾರಿಯಾಗಿದೆ. ರೈತರು, ಕಾರ್ಮಿಕರು ಏಣಿಗಳನ್ನು ಕೊಂಡೊಯ್ಯುವಾಗ ಮರೆತೋ ಅಥವಾ ಆಕಸ್ಮಿಕವಾಗಿಯೋ ವಿದ್ಯುತ್ ತಂತಿಗಳಿಗೆ ಸ್ಪರ್ಶಿಸಿ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಏಣಿ ತಯಾರಿಕಾ ಕಂಪನಿಗಳೂ ಹೊಣೆಯಾಗಬೇಕು. ಇಷ್ಟೆಲ್ಲಾ ಅನಾಹುತಗಳು ಸಂಭವಿಸಿದ ಮೇಲೂ ಕಂಪಮಿಯವರು ಜವಾಬ್ದಾರಿ ವಹಿಸಿಲ್ಲ. ರಬ್ಬರ್ ಅಳವಡಿಕೆ ಅಥವಾ ಇನ್ನಾವುದಾದರೂ ಬೇರೆ ಏಣಿ ತಯಾರಿಸಬಹುದಿತ್ತು. ಈ ಬಗ್ಗೆ ನಾವೂ ಮಾಧ್ಯಮಗಳ ಮೂಲಕ ಹಲವು ಬಾರಿ ಸಲಹೆ ನೀಡಿದ್ದೇವೆ ಎಂದ ಅವರು, ಅಲ್ಯುಮಿನಿಯಂ ಏಣಿ ನಿಷೇಧಿಸುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

——————
“ತೋಟಗಳಲ್ಲಿ ಹಿಂದೆಯೆಲ್ಲಾ ಬಿದಿರಿನ ಏಣಿ ಬಳಸಲಾಗುತ್ತಿತ್ತು. ಈಗ ಅವುಗಳ ಕೊರತೆ ಮತ್ತು ಪ್ರತೀ ವರ್ಷಕ್ಕೊಮ್ಮೆ ಬದಲಾಯಿಸಬೇಕಿರುವ ಕಾರಣಕ್ಕೆ ಈಗ ಅಲ್ಯುಮಿನಿಯಂ ಏಣಿಯನ್ನು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಇದನ್ನು ವಿದ್ಯುತ್ ಮಾರ್ಗ ಹಾದುಹೋದಲ್ಲಿ ಬಹಳ ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಹಾಗೆ ನೋಡಿದರೆ ವಿದ್ಯುತ್ ಮಾರ್ಗದ 20 ಅಡಿ ಅಂತರದಲ್ಲಿ ಮರಗಳನ್ನೂ ಬೆಳೆಸಬಾರದಂತಹ ಪರಿಸ್ಥಿತಿ ತಲೆದೋರುತ್ತದೆ. ತೋಟದ ನಿರ್ವಹಣೆ ವೇಳೆ ಅಲ್ಯುಮಿನಿಯಂ ಏಣಿಗಳ ಬದಲಿಗೆ ಬೇರೆ ಏಣಿ ಬಳಕೆಗೆ ಸರ್ಕಾರ ಪ್ರೋತ್ಸಾಹ ನೀಡಲಿ. ಈ ಬಗ್ಗೆ ಕಾಫಿ ಬೋರ್ಡ್, ರೈತವೇದಿಕೆಗಳು, ಕಾಫಿ ಬೆಳೆಗಾರರ ಸಂಘಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗಲಿ”
-ಬಿ.ಬಿ.ನಿಂಗಯ್ಯ, ಮಾಜಿ ಸಚಿವ

Spread the love

Related Articles

Leave a Reply

Your email address will not be published. Required fields are marked *

Back to top button