ಅರಣ್ಯ ಸಿಬ್ಬಂದಿ ದೌರ್ಜನ್ಯ; ಉಪ ವಿಭಾಗಾಧಿಕಾರಿಗಳ ಮುಂದೆ ಅರಣ್ಯವಾಸಿಗಳ ಆಕ್ರೋಶ

ಕಾರವಾರ : ಅರಣ್ಯ ಸಿಬ್ಬಂದಿಗಳಿಂದ ಕಾನೂನು ಬಾಹಿರವಾದ ದೌರ್ಜನ್ಯ,ಕಿರುಕುಳ ನಿಯಂತ್ರಿಸಿ,ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಹನೆಯ ಕಟ್ಟೆ ಒಡೆದೀತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರನಾಥ್ ನಾಯ್ಕ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಅವರು ಇಂದು ಭಟ್ಕಳ ಉಪವಿಭಾಗಾಧಿಕಾರಿ ಅವರನ್ನು ಅರಣ್ಯವಾಸಿಗಳೊಂದಿಗೆ ಭೇಟಿಯಾದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯ ಉಚ್ಛ ನ್ಯಾಯಾಲಯ ಮತ್ತು ಮುಖ್ಯಮಂತ್ರಿಗಳ ನಿರ್ದೇಶನವನ್ನು ನಿರ್ಲಕ್ಷಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಲಿ.ನಮ್ಮ ಸಹನೆಯನ್ನು ಪರೀಕ್ಷೀಸುವುದು ಸೂಕ್ತವಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗವು ಇಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಅವರನ್ನು ಭೇಟಿಯಾಗಿ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳದ ಕುರಿತು ಚರ್ಚಿಸಿದರು.
ಅರಣ್ಯ ಹಕ್ಕು ಕಾಯಿದೆ ಉರ್ಜಿತವಿರುವಾಗ ಅರಣ್ಯ ಅತಿಕ್ರಮಣದಾರರ ಮೂಲಭೂತ ಮತ್ತು ಜೀವನಾವಶ್ಯಕ ಕಾರ್ಯಚಟುವಟಿಕೆಗೂ ಅರಣ್ಯ ಸಿಬ್ಬಂದಿಗಳು ಆತಂಕ ಮಾಡುತ್ತಿರುವುದು ಖಂಡನಾರ್ಹ.ಉಚ್ಛ ನ್ಯಾಯಾಲಯವೂ ಸಹಿತ ಅರಣ್ಯವಾಸಿಗಳಿಗೆ ಮಂಜೂರಿ ಪ್ರಕ್ರಿಯೆ ಸಂದರ್ಭದಲ್ಲಿ ಆತಂಕ, ಒಕ್ಕಲೆಬ್ಬಿಸುವ ಕ್ರಿಯೆ ಜರುಗಿಸಬಾರದೆಂಬ ನಿರ್ದೇಶನವನ್ನು ನೀಡಿದೆ. ಆದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಖೇದಕರ ಎಂಬ ವಿಷಯ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು.
ಜೀವನಾಶ್ಯಕ ಮತ್ತು ಮೂಲಭೂತ ವ್ಯವಸ್ಥೆಗೆ ಆತಂಕಪಡಿಸದಂತೆ ನಿರ್ದೇಶನ ನೀಡಬೇಕೆಂದು ಸಭೆಯಲ್ಲಿ ಅಗ್ರಹಿಸಲಾಯಿತು.ಚರ್ಚೆಯ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ,ರಿಜ್ವಾನ್,ಕಯುಂ ಸಾಬ, ತಂಜೀಮ್ ಅಧ್ಯಕ್ಷ ಫರವೆಜ್ ಯಾಸೀಮ್,ತೋಪಿಕ್ ಬ್ಯಾರಿ,ಇನಾಯತಉಲ್ಲಾ ಸಾಬಂದ್ರಿ, ಸೈಯದ್ ಅಲಿ,ಫರಿದಾ ಬಾನು,ಕಂಬಳಿ ಆಚಾರಿ,ಮಹಮ್ಮದ ಶಬ್ಬೀರ್ ಸಾಬ,ಸೈಯದ್ ಅಲಿ,ಸಲೀಂ ಶಬ್ಬೀರ್ ನತಾರ್ ಹಾಗೂ ಪ್ರಮುಖರು ಭಾಗವಹಿಸಿದ್ದರು.
ಇತ್ತೀಚೆಗೆ ಅರಣ್ಯ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಪಟ್ಟ ಸ್ಥಳಗಳಿಗೆ ಹೋರಾಟಗಾರರ ವೇದಿಕೆ ನಿಯೋಗವು ಭೇಟಿಕೊಟ್ಟು ಪರಿಶೀಲಿಸಿತು.
ಅರಣ್ಯವಾಸಿಗಳ ತೀವ್ರ ಆಕ್ರೋಶ
ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳದ ಕುರಿತು ಸಾಕ್ಷ್ಯ ಚಿತ್ರ,ವಿಡಿಯೋ,ಪೋಟೋಗಳನ್ನೂ ಪ್ರದರ್ಶಿಸಿ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯದ ಕುರಿತು ನೊಂದ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳ ದುರ್ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳಿಂದ ಪದೇ ಪದೇ ಕಿರುಕುಳ,ದೌರ್ಜನ್ಯ,ಮಾನಸಿಕ ಮತ್ತು ದೈಹಿಕ ಹಿಂಸೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಹೋರಾಟಗಾರರೊಂದಿಗೆ ಮುಕ್ತವಾಗಿ ಚರ್ಚಿಸಲು ಅರಣ್ಯ ಅಧಿಕಾರಿಗಳೊಂದಿಗೆ ಅವಕಾಶ ನೀಡಬೇಕೆಂಬ ನಿಯೋಗದ ಬೇಡಿಕೆಗೆ ಅತೀ ಶೀಘ್ರದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದೆಂದು ಉಪವಿಭಾಗಾಧಿಕಾರಿ ಮಮತಾದೇವಿ ಅವರು ನಿಯೋಗಕ್ಕೆ ಆಶ್ವಾಸನೆ ನೀಡಿದರು.

