Tokyo Olympics Closing Ceremony: ಸೂರ್ಯ ಉದಯಿಸುವ ನಾಡಿನಿಂದ, ಸಿಟಿ ಆಫ್ ಲೈಟ್ಸ್ ಗೆ

ಟೋಕಿಯೋ: ಸೂರ್ಯ ಉದಯಿಸುವ ನಾಡಾದ ಜಪಾನಿನಿಂದ ಒಲಿಂಪಿಕ್ಸ್ ಕ್ರೀಡಾಕೂಟ ಸಿಟಿ ಆಫ್ ಲೈಟ್ಸ್ ಪ್ಯಾರಿಸ್ ಗೆ ಹೊರಟಿತು. 2024ರ ಒಲಿಂಪಿಕ್ಸ್ ಪ್ಯಾರಿಸ್ ನಗರದಲ್ಲಿ ನಡೆಯಲಿದೆ.
ಪದಕ ಗೆದ್ದವರೇ ಪದಕ ಹಾಕಿಕೊಂಡರು, 12 ವರ್ಷದ ಪುಟ್ಟ ಮಗು ಸಿರಿಯಾದ ಹೆನ್ಡಾ ಜಾಜಾ ಸ್ಪರ್ಧಿಸಿತು, 12 ವರ್ಷದ ಮಗು ಕೊಕೊನಾ ಹಿರಾಕಿ ಪದಕ ಗೆದ್ದಳು, 66 ವರ್ಷದ ಮೇರಿ ಹನ್ನಾ ಪಾಲ್ಗೊಂಡ ಹಿರಿಯ ಸ್ಪರ್ಧಿ ಎನಿಸಿದರು, ಜಗತ್ತಿನ ಅತ್ಯಂತ ಚಿಕ್ಕರಾಷ್ಟ್ರಗಳಲ್ಲಿ ಒಂದಾದ ಸ್ಯಾನ್ ಮರಿನೊ ಒಲಿಂಪಿಕ್ಸ್ ನಲ್ಲಿ ಪದಕದ ಖಾತೆ ತೆರೆಯಿತು, ಮೊದಲ ಬಾರಿಗೆ ಮಂಗಳ ಮುಖಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು, ಕೊನೆಯ ದಿನದಲ್ಲಿ ಮೂರು ಪದಕಗಳನ್ನು ಗೆದ್ದ ಅಮೆರಿಕ ಅತಿ ಹೆಚ್ಚು ಪದಕಗಳ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿತು, ಕೊರೊನಾ ಭಯ, ಅಂಗಣಕ್ಕಿಳಿದರೆ ನಿರ್ಭಯ, ಭಾರತಕ್ಕೆ ಪದಕ ಗಳಿಕೆಯಲ್ಲಿ ಸಪ್ತ ಸಂಭ್ರಮ, ಭಾರತಕ್ಕೆ ಅಥ್ಲೆಟಿಕ್ಸ್ ನಲ್ಲಿ ಚಿನ್ನ, ಹಾಕಿಯಲ್ಲಿ ಐತಿಹಾಸಿಕ ಕಂಚು, ಸೋಲುಂಡರೂ ಹೃದಯ ಗೆದ್ದ ಮಹಿಳೆಯ ಆಟದ ಮಿಂಚು…ಹೀಗೆ ನೆನಪುಗಳ ಬುತ್ತಿಯನ್ನಿಟ್ಟು… ಪ್ಯಾರಿಸ್ ಗೆ ಆಹ್ವಾನವನ್ನು ಕೊಟ್ಟು ಟೋಕಿಯೋ ಒಲಿಂಪಿಕ್ಸ್ ಸಮಾಪನಗೊಂಡಿತು.
ಕೊರೋನಾ ಸಾಂಕ್ರಮಿಕದ ಕಾರಣ ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಈ ವರ್ಷ ನಡೆಯಿತು. ಅಮೆರಿಕ 39 ಚಿನ್ನ, 41 ಬೆಳ್ಳಿ ಮತ್ತು 33 ಕಂಚಿನ ಪದಕ ಗಳಿಸಿ ಕೇವಲ 1 ಚಿನ್ನದ ಪದಕದ ಅಂತರದಿಂದ ಮೇಲುಗೈ ಸಾಧಿಸಿತು. 38 ಚಿನ್ನ, 32 ಬೆಳ್ಳಿ ಹಾಗೂ 18 ಕಂಚಿನ ಪದಕಗಳನ್ನು ಗೆದ್ದ ಚೀನಾ ಎರಡನೇ ಸ್ಥಾನ ಪಡೆಯಿತು. ಯಾವಾಗಲೂ ಆತಿಥೇಯ ರಾಷ್ಟ್ರ ಪದಕ ಗಳಿಕೆಯಲ್ಲಿ ಉತ್ತಮ ಪ್ರದರ್ಶನ ತೋರುವುದು ಸಾಮಾನ್ಯ, ಅದೇ ರೀತಿ ಆತಿಥೇಯ ಜಪಾನ್ 27 ಚಿನ್ನ, 14 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು. ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ 48ನೇ ಸ್ಥಾನ ಗಳಿಸಿತು. ಭಾರತ ಕೂಡ ಇದೇ ಮೊದಲ ಬಾರಿಗೆ 7 ಪದಕಗಳ ಸಾಧನೆ ಮಾಡಿತು. ಕಳೆದ ಏಳು ಒಲಿಂಪಿಕ್ಸ್ ಗಳಲ್ಲಿ ಅಮೆರಿಕ ಸತತ ಮೂರನೇ ಬಾರಿಗೆ ಒಟ್ಟು ಆರನೇ ಬಾರಿಗೆ ಅಗ್ರ ಸ್ಥಾನ ಪಡೆಯಿತು.
ಡಿಜಿಟಲ್ ತಂತ್ರಜ್ಞಾನದ ಶ್ರೇಷ್ಠ ಗುಣಮಟ್ಟದ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಕಂಡು ಬಂತು. ಕುಸ್ತಿಯಲ್ಲಿ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಮುನ್ನಡೆದರು. ಪ್ಯಾರಿಸ್ ಮೇಯರ್ ಗೆ ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ಐಒಸಿ ಧ್ವಜವನ್ನು ಹಸ್ತಾಂತರ ಮಾಡುವುದರೊಂದಿಗೆ 2024ರ ಒಲಿಂಪಿಕ್ಸ್ ಗೆ ಅಧಿಕೃತ ಆತಿಥ್ಯ ನೀಡಲಾಯಿತು.
ಟೋಕಿಯೋ ಒಲಿಂಪಿಕ್ಸ್ ಚಿತ್ರಪಟಗಳು




