Tokyo Paralympics: ಐದು ಎಸೆತ….ಮೂರು ವಿಶ್ವದಾಖಲೆ…. ಸುಮಿತ್ ಗೆ ಸುವರ್ಣ

ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ತೆರಳುವ ಮೊದಲೇ ವಿಶ್ವದಾಖಲೆ ಬರೆದಿದ್ದ ಭಾರತದ ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ತನ್ನದೇ ದಾಖಲೆಯನ್ನು ಮುರಿದು ಚಿನ್ನ ಗೆದ್ದಿದ್ದಾರೆ. ಸೋಮವಾರ ನಡೆದ F 64 ವಿಭಾಗದ ಸ್ಪರ್ಧೆಯಲ್ಲಿ ಸುಮಿತ್ 68.55 ಮೀ. ದೂರಕ್ಕೆ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನಗೆದ್ದರು.
66.90 ಮೀ. ಇದು ಟೋಕಿಯೋ ತಲಪುವುದಕ್ಕೆ ಮುನ್ನ ಸುಮಿತ್ ದಾಖಲಿಸಿದ್ದ ವಿಶ್ವದಾಖಲೆ. ಟೋಕಿಯೋ ದಲ್ಲಿ ಅವರು ಐದು ಎಸೆತಗಳನ್ನು ಎಸೆದಿದ್ದರು, ಅದರಲ್ಲಿ ಮೂರು ವಿಶ್ವದಾಖಲೆಯಾಗಿರುವುದು ವಿಶೇಷವಾಗಿತ್ತು.
ಮೊದಲ ಎಸೆತದಲ್ಲೇ 66.95 ಮೀ. ಎಸೆಯುವ ಮೂಲಕ ಸುಮಿತ್ ತನ್ನ ದಾಖಲೆ ಮುರಿದರು. ನಂತರ ಎರಡನೇ ಎಸೆತದಲ್ಲಿ 68.08 ಮೀ. ಎಸೆದು ನೂತನ ದಾಖಲೆ ಬರೆದರು. ಮೂರನೇ ಎಸೆತದಲ್ಲಿ ಹಿಡಿತ ತಪ್ಪಿ 65.09 ಮೀ. ಎಸೆದರು. ಆದರೆ ನಾಲ್ಕನೇ ಎಸೆತದಲ್ಲಿ 66.71 ಮೀ. ಎಸೆದು ಚೇತರಿಸಿಕೊಂಡರು. ಐದನೇ ಎಸೆತದಲ್ಲಿ 68.55 ಮೀ. ದೂರಕ್ಕೆ ಎಸೆದು ನೂತನ ವಿಶ್ವ ದಾಖಲೆಯೊಂದಿಗೆ ಭಾರತಕ್ಕೆ ದಿನದ ಎರಡನೇ ಚಿನ್ನ ತಂದುಕೊಟ್ಟರು.
ಕುಸ್ತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದಿದ್ದ ಸುಮಿತ್ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಪ್ಯಾರಾ ಅಥ್ಲೀಟ್ ಆದರು. ಆದರೆ ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಕೀರ್ತಿ ತಂದರು.
ಆರನೇ ದಿನದಲ್ಲಿ ಭಾರತ 2 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 7 ಪದಕಗಳ ಸಾಧನೆ ಮಾಡಿ ಅಂಕ ಪಟ್ಟಿಯಲ್ಲಿ 24ನೇ ಸ್ಥಾನ ಕಾಯ್ದುಕೊಂಡಿದೆ.
