ಲೀಡ್ಸ್ ಟೆಸ್ಟ್: ಭಾರತಕ್ಕೆ ಹೀನಾಯ ಸೋಲು

ಲೀಡ್ಸ್ : ಓಲ್ಲೇ ರಾಬಿನ್ಸನ್ (65ಕ್ಕೆ 5) ಅವರ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ 278 ರನ್ ಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ ಗಳ ಬೃಹತ್ ಜಯ ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು 78 ರನ್ ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ 432 ರನ್ ಗಳಿಸಿ 354 ರನ್ ಗಳ ಬೃಹತ್ ಮುನ್ನಡೆ ಕಂಡಿತು. ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಕಾಣಲಿಲ್ಲ. ಕೆ.ಎಲ್. ರಾಹುಲ್ ಅವರ ವಿಕೆಟ್ ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ರೋಹಿತ್ ಶರ್ಮಾ (59), ಚೇತೇಶ್ವರ ಪೂಜಾರ (91) ಹಾಗೂ ನಾಯಕ ವಿರಾಟ್ ಕೊಹ್ಲಿ (55) ತಾಳ್ಮೆಯ ಆಟ ಪ್ರದರ್ಶಿಸಿದರೂ ಇಂಗ್ಲೆಂಡ್ ನ ಬೌಲಿಂಗ್ ದಾಳಿ ಮುನ್ನಡೆಗೆ ಅವಕಾಶ ಕೊಡಲಿಲ್ಲ.
ರಾಬಿನ್ಸನ್ (5 ವಿಕೆಟ್) ಮತ್ತು ಕ್ರೆಗ್ ಓವರ್ಟನ್ (47ಕ್ಕೆ3) ಭಾರತ 278 ರನ್ ಗೆ ಸರ್ವ ಪತನವಾಗಲು ಕಾರಣರಾದರು. ಈ ಜಯದೊಂದಿಗೆ ಇಂಗ್ಲೆಂಡ್ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ 12 ಅಂಕಗಳನ್ನು ಗಳಿಸಿತು.
