ಪ್ರತಿಭಾನ್ವೇಷಣೆಯಲ್ಲಿ ಕ್ರೀಡಾ ಇಲಾಖೆಯ ಕ್ರಾಂತಿಕಾರಿ ಹೆಜ್ಜೆ : ಒಲಂಪಿಕ್ಸ್ ಗೆ ಸಿದ್ಧಿ ಜನಾಂಗದ ಪ್ರತಿಭೆಗಳ ತಯಾರಿ
ಬೆಂಗಳೂರು: ಇವರು ಸಾಮರ್ಥ್ಯವಿದ್ದರೂ ಅವಕಾಶ ವಂಚಿತರು. ಅರ್ಹತೆ ಇದ್ದರೂ ಮಾರ್ಗಗೊತ್ತಿಲ್ಲದವರು. ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೇರುವ ಶಕ್ತಿ ಇದ್ದರೂ ಯಾರೂ ಗುರುತಿಸುವ ಪ್ರಯತ್ನ ನಡೆಸಿರಲಿಲ್ಲ. ಹೀಗಾಗಿ ಎಲೆಮರೆ ಕಾಯಿಯಂತಿದ್ದ ಸಿದ್ದಿ ಜನಾಂಗದ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯ ಹಿನ್ನೆಲೆಯಲ್ಲಿ ಇಲಾಖೆಯ ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ 24 ಕ್ರೀಡಾ ಪ್ರತಿಭೆಗಳನ್ನು ಗುರುತಿಸಿದ್ದು, ಸಚಿವ ಡಾ. ನಾರಾಯಣಗೌಡ ನಿನ್ನೆ ಸಂವಾದ ನಡೆಸಿದರು.
ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹಳಿಯಾಳ, ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಿದ್ದಿ ಸಮುದಾಯದ ವಿದ್ಯಾರ್ಥಿಗಳನ್ನು ಕ್ರೀಡಾ ವಿಜ್ಞಾನ ಕೇಂದ್ರದ ಟೀಂ ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿದೆ. ಕ್ರೀಡಾ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಲ್ಲಿ ಯಾವ ಕ್ರೀಡೆಯ ಬಲವಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಜೊತೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಕುಶಲೋಪರಿ ನಡೆಸಿ, ಉನ್ನತ ತರಬೇತಿಗೆ ಚಾಲನೆ ನೀಡಿದರು.
ಮುಂದಿನ ಓಲಂಪಿಕ್ ಗಮನದಲ್ಲಿರಿಸಿಕೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಕ್ರೀಡಾ ಪ್ರತಿಭಾನ್ವೇಷಣೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಯಾವ ಬಗೆಯ ಕ್ರೀಡೆಯ ಆಸಕ್ತಿ ಹಾಗೂ ಸಾಮರ್ಥ್ಯವಿದೆ ಎನ್ನುವುದನ್ನು ಗುರುತಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುವುದು. ರಾಜ್ಯದ ಪ್ರತಿಷ್ಟಿತ ವಿದ್ಯಾನಗರ ಹಾಗೂ ವಿವಿದೆಡೆ ಇರುವ ಕ್ರೀಡಾ ವಸತಿ ನಿಲಯದಲ್ಲಿ ಈ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ರೀತಿಯ ಪರೀಕ್ಷೆ ನಡೆಸದೆ ನೇರವಾಗಿ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗುವುದು.

ಈ ನಾಲ್ಕು ಕ್ರೀಡೆಯಲ್ಲಿ ಇದೆ ಹೆಚ್ಚಿನ ಸಾಮರ್ಥ್ಯ :
ಸಿದ್ದಿ ಜನಾಂಗದ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ. ಕ್ರೀಡೆಯಲ್ಲೂ ಹೆಚ್ಚು ಆಸಕ್ತಿ ಇದೆ. ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಕಬ್ಬಡ್ಡಿ, ಬಾಕ್ಸಿಂಗ್, ರನ್ನಿಂಗ್ ಹಾಗೂ ಬಾಕ್ಸಿಂಗ್‍ನಲ್ಲಿ ಈ ವಿದ್ಯಾರ್ಥಿಗಳು ಹೆಚ್ಚು ಸಮರ್ಥರಿದ್ದಾರೆ. ಹೀಗಾಗಿ ಈ ನಾಲ್ಕೂ ಕ್ರೀಡೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಲು ಸಚಿವರು ಸೂಚನೆ ನೀಡಿದರು. ಜಯನಗರ ಕ್ರೀಡಾ ವಸತಿ ಶಾಲೆ ಸೇರಿದಂತೆ ವಿವಿಧ ಕ್ರೀಡಾ ವಸತಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೂ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಬಂಗಾರದ ಪದಕ ಗೆಲ್ಲುವೆ :
ಸಚಿವರು ಎಲ್ಲ ವಿದ್ಯಾರ್ಥಿಗಳ ಜೊತೆ ನೇರವಾಗಿ ಮಾತುಕತೆ ನಡೆಸಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತುಂಬ ಆಸಕ್ತಿ ಇದೆ. ಉತ್ತಮ ಅವಕಾಶ ನೀಡಿದ್ದಾರೆ. ಹೆಚ್ಚಿನ ತರಬೇತಿ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕೆ ಗೆದ್ದು ದೇಶದ ಕೀರ್ತಿ ಹೆಚ್ಚಿಸುವುದಾಗಿ ವಿಶ್ವಾಸದ ಮಾತನಾಡಿದರು. ಕ್ರೀಡಾ ಇಲಾಖೆ ಎಲ್ಲ ರೀತಿಯ ನೆರವು ನೀಡುತ್ತದೆ. ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಉತ್ತಮ ತರಬೇತುದಾರರು, ಗುಣಮಟ್ಟದ ಕ್ರೀಡಾ ಸೌಕರ್ಯ ಎಲ್ಲವನ್ನೂ ನೀಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗಲಿದೆ :
ಕೇಂದ್ರ ಸರ್ಕಾರ ಕ್ರೀಡೆಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ಸಹ ವಿವಿಧ ಯೋಜನೆ ಘೋಷಿಸಿದೆ. ಕ್ರೀಡೆಗೆ ಸಾಕಷ್ಟು ನೆರವನ್ನೂ ನೀಡುತ್ತಿದೆ. ಇದೇ ಕಾರಣಕ್ಕಾಗಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗಿದೆ. ಆಯ್ಕೆಯಾಗಿರುವ ಕ್ರೀಡಾ ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆಯಬೇಕು. ಅಧಿಕಾರಿಗಳು ಸಹ ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಕ್ರೀಡಾ ವಿಜ್ಞಾನ ಕೇಂದ್ರದ ಆಂತೋನಿ, ಮತ್ತಿತರ ಪ್ರಮುಖರು ಉಪಸ್ಥಿರಿದ್ದರು.




