ಟೋಕಿಯೋ ಒಲಿಂಪಿಕ್ಸ್ ಗೆ ಪೊಲೀಸ್ ಕಾನ್ಸ್ಸ್ಟೇಬಲ್

ವರದಿ: ಸೋಮಶೇಖರ್ ಪಡುಕರೆ
ಚೆನ್ನೈ: ಬರಿಗಾಲಲ್ಲೇ ಓಟವನ್ನು ಆರಂಭಿಸಿ, ಗಾರೆ ಕೆಲಸದ ಮೂಲಕ ಫಿಟ್ನೆಸ್ ಕಾಯ್ದುಕೊಂಡು, ಓಟದ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದ ಚೆನ್ನೈನ ಪೊಲೀಸ್ ಕಾನ್ಸ್ಟೇಬಲ್ ಈಗ ಟೋಕಿಯೋ ಒಲಿಂಪಿಕ್ಸ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ.
4×400 ಮೀ. ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ತಮಿಳುನಾಡು ಪೊಲೀಸ್ ಪೇದೆ ನಾಗನಾಥನ್ ಪಾಂಡಿ ಅವರ ಜೀವನದ ಹಾದಿ ಇತರರಿಗೆ ಮಾದರಿ.
‘ಪೊಲೀಸ್ ಎಕ್ಸ್ ಪ್ರೆಸ್’ ಖ್ಯಾತಿಯ ನಾಗನಾಥನ್ ಅತ್ಯಂತ ಬಡ ಕುಟುಂಬದಿಂದ ಬಂದ ಅಥ್ಲೀಟ್. ಚಿಕ್ಕಂದಿನಲ್ಲೇ ಗಾರೆ ಕೆಲಸ ಮಾಡಿಕೊಂಡಿದ್ದ ಕಾರಣ ಓಟಕ್ಕೆ ಅನುಕೂಲವಾಗುವ ಮೈಕಟ್ಟನ್ನು ಹೊಂದಿದ್ದರು. 1500 ಮೀ. ಓಟವನ್ನು ಬರಿಗಾಲಿನಲ್ಲೇ ಓಡಿ ಪದಕ ಗೆದ್ದ ಓಟಗಾರ. ಚೆನ್ನೈನ ಪುದುಪೆಟೈನಲ್ಲಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗನಾಥನ್ “ನನ್ನ ಕಷ್ಟದ ಬದುಕಿನ ಓಟ ನನ್ನನ್ನು ಟೀಕಿಯೋ ಒಲಿಂಪಿಕ್ಸ್ ವರೆಗೆ ಕೊಂಡೊಯ್ಯುತ್ತದೆ ಎಂದು ಊಹಿಸಿರಲಿಲ್ಲ,” ಎಂದಿದ್ದಾರೆ.
ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿರುವ ನಾಗನಾಥನ್ ಅವರ ಕುಟುಂಬಕ್ಕೆ ಈ ಓಟಗಾರನೇ ಆಧಾರ. ತಂದೆ ಗಾರೆ ಕೆಲಸ ಮಾಡಿಕೊಂಡಿದ್ದರೆ ತಾಯಿಗೆ ಮನೆಗೆಲಸ. “ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಬರಿಗಾಲಿನಲ್ಲೇ ಓಡುತ್ತಿದ್ದೆ. ಶೂ ಧರಿಸುವ ಸಾಮರ್ಥ್ಯ ಇರಲಿಲ್ಲ. ಶೂ ಅಗತ್ಯವೆಂಬುದೂ ಗೊತ್ತಿರಲಿಲ್ಲ. ಒಟ್ಟಾರೆ ಓಡುವುದು. ಗುರಿ ತಲುಪುವುದು. ಈಗ ಸರಿಯಾದ ಗುರಿ ತಲುಪಿದ್ದೇನೆ ಎಂಬುದೇ ಸಂತಸ. ಈಗ ಸರಿಯಾದ ಟ್ರ್ಯಾಕ್ ನಲ್ಲೇ ಶೂ ಧರಿಸಿ ಓಡುತ್ತಿದ್ದೇನೆ,” ಎಂದು ನಾಗನಾಥನ್ ನಗುತ್ತ ನುಡಿದರು.

“ಕಾಲೇಜು ಸೇರಿದ ನಂತರ ಜನ ನನ್ನನ್ನು ಗುರುತಿಸಲಾರಂಭಿಸಿದರು, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲಾರಂಭಿಸಿದೆ. ಪೊಲೀಸ್ ಇಲಾಖೆ ಸೇರಿದ ನಂತರ ಹೆಚ್ಚಿನ ಗೌರವ ಸಿಕ್ಕಿತು. ಹಾಗಂತ ಕ್ರೀಡೆಯ ಹೆಸರಿನಲ್ಲಿ ಪೊಲೀಸ್ ಕೆಲಸಕ್ಕೆ ಗೈರಾಗುತ್ತಿರಲಿಲ್ಲ. ಸ್ಪರ್ಧೆಗಳಿಗೆ ವಿಶೆಷವಾದ ರಜೆ ನೀಡುತ್ತಿದ್ದರು. ದಿನವೂ ಬೆಳಿಗ್ಗೆ ಅಭ್ಯಾಸ ನಡೆಸುತ್ತಿದ್ದೆ, ಅದಕ್ಕೆ ತಕ್ಕ ಬೆಲೆ ಸಿಕ್ಕಿದೆ, ದೇಶವನ್ನು ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ,” ಎಂದರು.
ಬರಿಗಾಲಲ್ಲೇ ಕಂಫರ್ಟ್!!:
ಧರಿಸಲು ಶೂ ಇಲ್ಲದೆ ಬರಿಗಾಲಲ್ಲೇ ಓಟ ಆರಂಭಿಸಿದ ನಾಗನಾಥನ್ ಗೆ ರಾಜ್ಯ ಮಟ್ಟದಲ್ಲಿ ಶೂ ಧರಿಸಿ ಓಡುವಾಗ ಅಷ್ಟು ಸಲೀಸು ಅನಿಸುತ್ತಿರಲಿಲ್ಲವಂತೆ. ಬರಿ ಗಾಲಲ್ಲೇ ಓಡುವುದು ಮಜಾ ಎನ್ನುತ್ತಾರೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಮುದಿ ತಾಲೂಕಿನ ಸಂಗಂಪಟ್ಟಿಯಲ್ಲಿ ಈಗ ಸಂಭ್ರಮ.ಆ ಊರಿನಲ್ಲಿ ಈಗ ಪದಕ ಗೆದ್ದಷ್ಟೇ ಖುಷಿಯಂತೆ. “ನಾನಿನ್ನೂ ಒಲಿಂಪಿಕ್ಸ್ ಗೇ ಹೋಗಿಲ್ಲ, ಆದರೆ ಊರಿನಲ್ಲೆಲ್ಲ ಜನ ಸಂಭ್ರಮಿಸುತ್ತಿದ್ದಾರೆ. ನಡೆದು ಹೋದರೆ ಹೂವಿನ ಮಾಲೆ ತಂದು ಹಾಕುತ್ತಾರೆ, ಅಷ್ಟು ಖುಷಿ ಅವರಿಗೆ, ಇದಕ್ಕಿಂತ ಸಂಭ್ರಮ ಬೇರೆ ಯಾವುದಿದೆ?” ಎನ್ನುತ್ತಾರೆ ನಾಗನಾಥನ್. ಗಾರೆ ಕೆಲಸ ಮಾಡುವ ಪಾಂಡಿ ಮತ್ತು ಮನೆ ಕೆಲಸ ಮಾಡುವ ತಾಯಿ ಪಂಚವರ್ಣ ಅವರಿಗೆ ಈಗ ಸಂಭ್ರಮದ ಕ್ಷಣ.




