ಇತರ ಕ್ರೀಡೆಕ್ರೀಡೆ

Priya Mohan : ವಿಶ್ವ ಜೂನಿಯರ್ ಅಥ್ಲೆಟಿಕ್ಸ್ : ಕರ್ನಾಟಕದ ಏಕೈಕ ಸ್ಪರ್ಧಿ ಪ್ರಿಯಾ

ಸೋಮಶೇಖರ್ ಪಡುಕರೆ

ಬೆಂಗಳೂರು : ಅತ್ಯಂತ ಚಿಕ್ಕ ಪ್ರಾಯದಲ್ಲೇ ಓಟದ ಅಂಗಣಕ್ಕಿಳಿದು ಒಲಿಂಪಿಯನ್ ಎಂ.ಆರ್. ಪೂವಮ್ಮ ಅವರ ಜೂನಿಯರ್ ದಾಖಲೆಯನ್ನು ಮುರಿದು, ಓಟದಲ್ಲಿ ಹೊಸ ಅಧ್ಯಾಯ ಬರೆಯುತ್ತಿರು ಕರ್ನಾಟಕದ ಪ್ರಿಯಾ ಮೋಹನ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಆಗಸ್ಟ್ 17ರಿಂದ ಆರಂಭಗೊಳ್ಳಲಿರುವ ಈ ಜಾಗತಿಕ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಥ್ಲೆಟ್ ಪ್ರಿಯಾ ಮೋಹನ್. ತುಮಕೂರು ಜಿಲ್ಲೆಯವರಾದ ಪ್ರಿಯಾ ಮೋಹನ್ ಅವರಿಗೆ ಖ್ಯಾತ ಅಥ್ಲೆಟಿಕ್ಸ್ ಕೋಚ್ ಅರ್ಜುನ್ ಅಜಯ್ ತರಬೇತಿ ನೀಡುತ್ತಿದ್ದಾರೆ. ಒಲಿಂಪಿಕ್ಸ್ ಆಯ್ಕೆ ಟ್ರಯಲ್ಸ್ ನಲ್ಲಿ ಅರ್ಹತೆ ಪಡೆದಿದ್ದರೂ ಕ್ಯಾಂಪ್ ನಲ್ಲಿ ಇದ್ದವರಿಗೆ ಮಾತ್ರ ಪಾಲ್ಗೊಳ್ಳುವ ಅವಕಾಶ ಎಂಬ ನಿಯಮದ ಕಾರಣ ಅವರು ಟೋಕಿಯೋ ಒಲಿಂಪಿಕ್ಸ್ ನಿಂದ ವಂಚಿತರಾಗಿದ್ದರು.

18 ವರ್ಷ ಪ್ರಾಯದ ಪ್ರಿಯಾ ಮೋಹನ್, 200 ಮತ್ತು 400 ಮೀ. ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಜೂನಿಯರ್ ನ್ಯಾಷಲ್ಸ್ ನಲ್ಲಿ ಪದಕ ಗೆದ್ದಿರುವ ಪ್ರಿಯಾ; ಸ್ಪರ್ಧಿಸಿದ ಮೊದಲ ಸೀನಿಯರ್ ನ್ಯಾಷಲ್ ಸ್ಪರ್ಧೆಯಲ್ಲೇ ಚಿನ್ನ ಗೆದ್ದಿರುವುದು ವಿಶೇಷ.

ಗುರುವಾರ ನೈರೋಬಿಯಿಂದ 24x7livekannada ಜತೆ ಮಾತನಾಡಿದ ಪ್ರಿಯಾ ಮೋಹನ್ “ಇದು ನನ್ನ ಮೊದಲ ವಿಶ್ವ ಚಾಂಪಿಯನ್ಷಿಪ್, ಈಗಾಗಲೇ ಎರಡು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವೆ. ನನ್ನಲ್ಲಿರು ಉತ್ಸಾಹವನ್ನು ಕಂಡು ನಮ್ಮ ತಾಯಿ ಅರ್ಜುನ್ ಸರ್ ಅವರಲ್ಲಿ ತರಬೇತಿಗಾಗಿ ಸೇರಿಸಿದರು. ಅಥ್ಲೆಟಿಕ್ಸ್ ನಿಂದಾಗಿ ಓದಿಗೆ ಅಡ್ಡಿಯಾಗಬಹುದೆಂಬ ಆತಂಕ ಅವರಲ್ಲಿದ್ದಿತ್ತು. ಆದರೆ ಈಗ ಖುಷಿಯಾಗಿ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಅತ್ಯಂತ ಆತ್ಮವಿಶ್ವಾಸದಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ.‌ ಊಟಿಯಲ್ಲಿ ತರಬೇತಿ ಪಡೆದಿರುವುದು ಇಲ್ಲಿಯ ಹವಾಮಾನಕ್ಕೆ ಹೊಂದಿಕೊಳ್ಳಲು ನೆರವಾಗಿದೆ. ಕೋಚ್ ಅರ್ಜುನ್ ಸರ್ ಉತ್ತಮ ರೀತಿಯಲ್ಲಿ ತರಬೇತಿ ನೀಡಿ ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ. ವಿಜ್ಞಾನ ಓದು ಎಂದು ಹೇಳುತ್ತಿದ್ದ ಅಮ್ಮ ಈಗ ಕಲಾ ವಿಭಾಗ ತೆಗೆದುಕೊ ಕ್ರೀಡೆಯ ಅಭ್ಯಾಸಕ್ಕೆ ಹೆಚ್ಚು ಸಮಯ ವಿನಿಯೋಗಿಸಬಹುದು ಎಂದು ಸಲಹೆ ನೀಡುತ್ತಾರೆ. ಅಪ್ಪ, ಅಮ್ಮ ಮತ್ತು ಗುರು ಅರ್ಜುನ್ ಅವರ ಆಶೀರ್ವಾದ ಮತ್ತು ಶ್ರಮದ ಫಲವಾಗಿ ಪದಕ ಗೆಲ್ಲಬೇಕು, ದೇಶಕ್ಕೆ, ಕರ್ನಾಟಕಕ್ಕೆ ಕೀರ್ತಿ ತರಬೇಕು,” ಎಂದು ಹೇಳಿದರು.

ನೈರೋಬಿಯಲ್ಲಿ ಈ ತಿಂಗಳ 17 ರಿಂದ 22ರ ವರೆಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button