Afghanistan Sports: ಹೆಣಗಳ ಲೆಕ್ಕಹಾಕುವ ತಾಲಿಬಾನಿಗಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಇದೆಯೇ?

ಸೋಮಶೇಖರ್ ಪಡುಕರೆ
ಅಫ್ಘಾನಿಸ್ತಾನದಲ್ಲಿ ಈಗ ಬದುಕು ಅತಂತ್ರ. ಎರಡನೇ ಬಾರಿಗೆ ಕಾಬೂಲ್ ಭಯೋತ್ಪಾದನಾ ಸಂಘಟನೆಯಾದ ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕಿದೆ. ತಾಲಿಬಾನಿ ಮುಖಂಡರಿಗೆ ಕ್ರಿಕೆಟ್ ಬಗ್ಗೆ ಬಹಳ ಆಸಕ್ತಿ ಇದೆ. ಇದರಿಂದಾಗಿ ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಅಡ್ಡಿಯಾಗದು. ನಾವು ಮೂರನೇ ಹಂತದ ಶಿಬಿರ ಆರಂಭಿಸಿದ್ದೇವೆ. ಮುಂದಿನ ವಾರ ಪಾಕಿಸ್ತಾನದ ವಿರುದ್ಧ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದೇವೆ” ಎಂದು ಅಫಘಾನಿಸ್ತಾ ಕ್ರಿಕೆಟ್ ಸಂಸ್ಥೆಯ ಸಿಇಒ ಹಮಿದ್ ಶಿನಿವಾರಿ ಹೇಳಿದ್ದಾರೆ.
ಜನರು ಜೀವ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದರೆ, ಈ ಹಮಿದ್ ಗೆ ಕ್ರಿಕೆಟ್ ನ ಚಿಂತೆ. ದೇಶದ ಇಬ್ಬರು ಪ್ರಮುಖ ಆಟಗಾರರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಹೊರ ದೇಶದಲ್ಲಿದ್ದು ತಮ್ಮ ಕುಟುಂಬಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಶೀದ್ ಖಾನ್ ಇಂಗ್ಲೆಂಡ್ ನಲ್ಲಿ ಹಂಡ್ರಡ್ಸ್ ಟೂರ್ನಿ ಆಡುತ್ತಿದ್ದು ಸ್ಥಳೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಬಿ ಸದ್ಯ ದುಬೈಯಲ್ಲಿದ್ದಾರೆ.
ಮರುಕಳಿಸದಿರಲಿ ರಕ್ತಸಿಕ್ತ ಇತಿಹಾಸ….
ತಾಲಿಬಾನಿಗಳು ಧರ್ಮಾಂಧರು, ವಿಚಾರಣೆ ಮಾಡದೇ ಶಿಕ್ಷೆ ನೀಡುವವರು. ಧರ್ಮದ ವಿಷಯ ಬಂದಾಗ ಕ್ಷಮೆ ಎಂಬ ಪದವನ್ನೇ ಬಳಸುವವರಲ್ಲ. ಇವರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಧರ್ಮವಿರೋಧದಂತೆ. ಅದಕ್ಕಾಗಿಯೇ ಪ್ರಸಿದ್ಧ ಘಾಝಿ ಕ್ರೀಡಾಂಗಣವನ್ನು ಸ್ಮಶಾನವನ್ನಾಗಿ ಮಾಡಿದರು. 2011ರಲ್ಲಿ ಈ ಕ್ರೀಡಾಂಗಣ ಹೊಸ ರೂಪ ಕಾಣುವುದಕ್ಕೆ ಮೊದಲು ಅದರ ಹತ್ತಿರಕ್ಕೆ ಜನ ಹೋಗುತ್ತಿರಲಿಲ್ಲ. 1996-2001ರಲ್ಲಿ ಅಫಘಾನಿಸ್ತಾನ ಇದೇ ತಾಲಿಬಾನಿಗಳ ಹಿಡಿತದಲ್ಲಿತ್ತು. ಆಗ ಗಾಝೀ ಅಂಗಣದಲ್ಲಿ ನಡೆಯುತ್ತಿದ್ದುದು ಕೇವಲ ಸಾವಿನ ಆಟ. ಅಂದು ತಮ್ಮ ಬಂಧುಗಳನ್ನು ತಾಲಿಬಾನಿಗಳು ಅಂಗಳದಲ್ಲಿ ಗುಂಡಿಟ್ಟು ಕೊಂದ ದೃಶ್ಯವನ್ನು ನೋಡಿದವರು ಅಲ್ಲಿಗೆ ಹೋಗಲು ಈಗಲೂ ಹೆದರುತ್ತಾರೆ.

ಸಾರ್ವನಿಕವಾಗಿ ಪರಸ್ಪರ ಪ್ರೀತಿಸಿದವರನ್ನು ಈ ಅಂಗಣಕ್ಕೆ ತೆರೆದ ವಾಹನದಲ್ಲಿ ಕರೆದು ತಂದು ಕಲ್ಲು ಹೊಡೆದು ಸಾಯಿಸುತ್ತಿದ್ದರು. ಬೇರೆ ಧರ್ಮ ವಿರೋಧಿ ಎನಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಸಾಬೀತಾದಲ್ಲಿ ಘಾಝಿ ಅಂಗಣದಲ್ಲೇ ಗುಂಡಿಟ್ಟು ಸಾಯಿಸಲಾಗುತ್ತಿತ್ತು. ಇಲ್ಲ ಶಿರಚ್ಛೇದ ಮಾಡಲಾಗುತ್ತಿತ್ತು. ಘಾಝಿ ಕ್ರೀಡಾಂಗಣವನ್ನು ಹಿಂದೆ ಫುಟ್ಬಾಲ್ ಆಟಕ್ಕೆ ಬಳಸಲಾಗುತ್ತಿತ್ತು. ಆಗ ಅಲ್ಲಿ ಚೆಂಡು ಉರುಳಿ ಗೋಲ್ ಬಾಕ್ಸ್ ಸೇರುತ್ತಿತ್ತು. ಆದರೆ ತಾಲಿಬಾನ್ ಆಡಳಿತದ ವೇಳೆ ಉರುಳಿದ್ದು ಸಹಸ್ರಾರು ಮಂದಿಯ ತಲೆ. ಮಡುಗಟ್ಟಿದ ರಕ್ತ. ಸಾಮಾನ್ಯವಾಗಿ ಫುಟ್ಬಾಲ್ ಅಂಗಣದ ಗೋಲ್ ಬಾಕ್ಸ್ ನ ಅಂಚಿಗೆ ಬಿಳಿ ಬಣ್ಣ ಬಳಿಯುತ್ತಾರೆ. ಆದರೆ ಘಾಝಿ ಅಂಗಣದಲ್ಲಿದ್ದ ಗೋಲ್ ಬಾಕ್ಸ್ ಕಪ್ಪಾಗಿತ್ತು. ಅದಕ್ಕೆ ಆ ಬಣ್ಣ ಕೊಟ್ಟಿದ್ದಲ್ಲ ಬದಲಾಗಿ ಅಪರಾಧಿಗಳ ಕೈಕಾಲು ಕಟ್ಟಿ ತಲೆಕೆಳಗೆ ಮಾಡಿ ನೇತು ಹಾಕಲಾಗುತ್ತಿತ್ತು. ಹಿಂಸೆ ಕೊಟ್ಡು ಸಾಯಿಸಬೇಕೆಂದರೆ ಕಲ್ಲುಗಳಿಂದ ಹೊಡೆದು ಸಾಯಿಸಲಾಗುತ್ತಿತ್ತು. ಒಂದೇ ಹೊಡೆತಕ್ಕೆ ಸಾಯಿಸಬೇಕೆಂದರೆ ಬಂದೂಕಿನಿಂದ ತಲೆಗೆ ಗುರಿ ಇಟ್ಟು ಸಾಯಿಸುತ್ತಿದ್ದರು….ಮತ್ತು ಶಿರಚ್ಛೇದ ವನ್ನೂ ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಆ ಕಪ್ಪು ರುಮಾಲನ್ನು ಗೋಲ್ ಬಾಕ್ಸ್ ಗೆ ಕಟ್ಟುತ್ತಿದ್ದರು.ಇದರಿಂದಾಗಿ ಅದು ಕಪ್ಪಾಗಿ ಕಾಣುತ್ತಿತ್ತು. ನೀಲಿ ಬುರ್ಕಾ ಧರಿಸಿದ ಅದೆಷ್ಟೋ ಹೆಣ್ಣು ಮಕ್ಕಳನ್ನು ಇದೇ ಅಂಗಣದಲ್ಲಿ ಶಿರಚ್ಛೇದ ಮಾಡಲಾಗಿತ್ತು. 2001ರಲ್ಲಿ ತಾಲಿಬಾನ್ ಗಳು ಪಲಾಯನ ಗೈದ ನಂತರ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲಾಯಿತು. ಒಳಗಿನ ಸಂಪೂರ್ಣ ಮಣ್ಣನ್ನು ತೆಗೆಯಲಾಯಿತು. ಏಕೆಂದರೆ ಅ ಮಣ್ಣಿಗೆ ನೀರಿಗಿಂತ ರಕ್ತ ಸೇರಿದ್ದೇ ಹೆಚ್ಚು. ಅಲ್ಲಿಯ ಹುಲ್ಲುಗಳಿಗೂ ತಾಲಿಬಾನ್ ಭಯೋತ್ಪಾದಕರ ಭಯವಂತೆ, ಹಾಗಾಗಿ ಅಲ್ಲಿ ಹುಲ್ಲಕೂಡ ಹುಟ್ಟುತ್ತಿರಲಿಲ್ಲವಂತೆ.
ಕ್ರೀಡೆಗಳನ್ನೇ ನಿಷೇಧ ಮಾಡಿದ ತಾಲಿಬಾನಿಗಳು ಈಗ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೋ ತಿಳಿಯದು. 2004 ರಿಂದ ಅಫ್ಘಾನಿಸ್ತಾನದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರು ಫುಟ್ಬಾಲ್ ತಂಡ ಕಟ್ಟಿ ಆಡುತ್ತಿದ್ದಾರೆ. ಘಾಝಿ ಅಂಗಣದಲ್ಲಿ ಗುಂಡಿನ ಸದ್ದು, ಸಾವು ನೋವಿನ ಆಕ್ರಂದನ ನಿಂತಿದೆ. 2008 ಮತ್ತು 2012 ರ ಒಲಿಂಪಿಕ್ಸ್ ನಲ್ಲಿ ರೊಹಲ್ಲಾ ನಿಕ್ಪಾಯ್ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ನಿರಾಶ್ರಿತರ ತಾಣದಲ್ಲೇ ಕ್ರಿಕೆಟ್ ಆಡಿದ ಹುಡುಗರ ತಂಡದಿಂದ ಕೂಡಿದ್ದ ಅಫಘಾನಿಸ್ತಾನ ಕ್ರಿಕೆಟ್ ತಂಡ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಜಗತ್ತಿನ ಪ್ರಮುಖ ಲೀಗ್ ಗಳಲ್ಲಿ ದೇಶದ ಕ್ರಿಕೆಟಿಗರು ಆಡುತ್ತಿದ್ದಾರೆ. ಹೊಸ ಬದುಕಿನೆಡಗೆ ಹೆಜ್ಜೆ ಹಾಕಿದ ಜನರಿಗೆ ಈಗ ಮತ್ತೆ ಧರ್ಮಾಂಧ ತಾಲಿಬಾನಿಗಳ ಆತಂಕದ ನೆರಳು. ರಕ್ತ ಹರಿಯುತ್ತಿದ್ದ ಘಾಝಿ ಅಂಗಣ ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವಾಗಿದೆ. ಅಲ್ಲಿ ಆಟಗಳು ನಡೆಯಲಿ ಹೊರತು ಸಾವಿನಾಟವಲ್ಲ.



