ಕಾಲಿನಲ್ಲೇ ಕ್ಯಾರಂ ಆಡುವ ಹರ್ಷಾದ್!!

ಸೋಮಶೇಖರ್ ಪಡುಕರೆ
ಕ್ಯಾರಂ ಕೈಯಲ್ಲೇ ಆಡಬೇಕು. ಬೇರೆ ಯಾವ ರೀತಿಯಲ್ಲಿ ಆಡಿದರೂ ಅದು ಆಟದ ನಿಯಮಕ್ಕೆ ವಿರುದ್ಧ. ಆದರೆ ಕೈಯೇ ಇಲ್ಲದವರು? ಬೇರೆ ದಾರಿ ಇಲ್ಲದೆ ಬೇರೆ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಿ ಎನ್ನಬಹುದು. ಮುಂಬಯಿಯ ಯುವಕನೊಬ್ಬ ಕ್ಯಾರಂನ ಮೂಲ ನಿಯಮವನ್ನೇ ಬದಿಗೊತ್ತಿ ಕಾಲಿನಲ್ಲೇ ಕ್ಯಾರಂ ಆಡಿ ಎಲ್ಲರ ಗಮನ ಸೆಳೆದಿದ್ದಾನೆ. ಅದು ಆತ ಕ್ಯಾರಂ ಆಟದ ನಿಯಮಕ್ಕೆ ಸವಾಲೆಸಿದ್ದಲ್ಲ, ಬದಲಾಗಿ ಹುಟ್ಟಿನಿಂದ ಎರಡೂ ಕೈಗಳಿಲ್ಲದೆ ತನ್ನ ಅಸಾಹಯಕತೆಯನ್ನೇ, ನೋವನ್ನೇ ಶಕ್ತಿಯಾಗಿಸಿಕೊಂಡು ಕಾಲಿನಲ್ಲಿ ಕ್ಯಾರಂ ಆಡುತ್ತಿದ್ದಾನೆ ಮುಂಬೈಯ ಕುರ್ಲಾದ ಸಾಧಕ ಹರ್ಷಾದ್ ಗೊಥಾಂಕರ್.
ವ್ಯಾಟ್ಸಪ್ ನಲ್ಲಿ ಬಂದ ವೀಡಿಯೋದಲ್ಲಿ ಹರ್ಷಾದ್ ಗೊಥಾಂಕರ್ ಕಾಲಿನಲ್ಲೇ ಕ್ಯಾರಂ ಆಡುತ್ತಿರುವುದನ್ನು ಗಮನಿಸಿದಾಗ ಅಚ್ಚರಿ. ದೂರವಾಣಿ ಮೂಲಕ ಕರೆ ಮಾಡಿದಾಗ ಆತನ ಬದುಕಿನ ಕತೆಯನ್ನು ಕೇಳಿ ಕಣ್ಣಾಲಿಗಳು ಒದ್ದೆಯಾವು. “ನಿಜ ಸರ್ ನಾನೇ ಹರ್ಷಾದ್, ಕೈ ಇಲ್ಲದ ಕಾರಣ ಕಾಲಿನಲ್ಲೇ ಆಡುತ್ತಿದ್ದೇನೆ, ನನ್ನ ಆಟವನ್ನು ನೋಡಿ ಎಲ್ಲರೂ ಖುಷಿಪಡುತ್ತಾರೆ ಆದರೆ ಎಲ್ಲಿಯೂ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ. ಕ್ಯಾರಂನ ನಿಯಮಕ್ಕೆ ವಿರುದ್ಧ ಎನ್ನುತ್ತಾರೆ. ಕೆಲವು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಂದ್ಯಗಳನ್ನು ಆಡಿದ್ದೇನೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಪಂದ್ಯವನ್ನಾಡಲು ಆಹ್ವಾನ ಬಂದಿತ್ತು, ಆದರೆ ಕೋವಿಡ್ ಕಾರಣ ಎಲ್ಲಿಗೂ ಪ್ರಯಾಣ ಮಾಡಲಿಲ್ಲ,” ಎನ್ನುತ್ತಾರೆ ಹರ್ಷಾದ್.

ದುರಂತ:
ಹರ್ಷಾದ್ ಅವರ ತಂದೆ ಶಂಕರ್ ಕೊರೋನಾದ ಅಲೆಯಲ್ಲಿ ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾದರು. ಎರಡೂ ಕೈಗಳಲ್ಲಿದ ಹರ್ಷಾದ್ ಅವರ ಮೇಲೆ ಮನೆಯ ಜವಾಬ್ದಾರಿ ಬಿದ್ದಿದೆ. ತಾಯಿ ಮತ್ತು ಅಜ್ಜಿಯ ಆರೈಕೆ ಮಾಡಬೇಕಾಗಿದೆ. ಜತೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಬೇಕಾಗಿದೆ. ದೂರವಾಣೆ ಮೂಲಕ ಕರೆ ಮಾಡಿದಾಗ ಹರ್ಷಾದ್ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಬಾಂದ್ರಾದಲ್ಲಿರುವ ಅಮೆಜಾನ್ ಕಂಪೆನಿಯಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ಅಪರೇಟರ್ ಕೆಲಸವನ್ನು ಅವರು ಕಾಲಿನಲ್ಲೇ ಮಾಡುತ್ತಿದ್ದರು.
“ನಮ್ಮ ತಂದೆ ಈ ನಡುವೆ ನಮ್ಮನ್ನು ಬಿಟ್ಟುಹೋಗುತ್ತಾರೆಂದು ಊಹಿಸಿರಲಿಲ್ಲ. ನಾನೇ ಒಂದು ರೀತಿಯಲ್ಲಿ ಬೇರೆಯವರನ್ನು ಅವಲಂಭಿಸಿದ್ದೆ, ಈಗ ಅಮ್ಮ ಮತ್ತು ಅಜ್ಜಿಯನ್ನು ನೋಡಿಕೊಳ್ಳಬೇಕಾಗಿದೆ,’’ ಎಂದು ಹರ್ಷಾದ್ ಹೇಳುತ್ತಿರುವಾಗ ವಿಧಿಯನ್ನು ಹಳಿಯದೇ ದಾರಿ ಇರಲಿಲ್ಲ.
ಸದ್ಯ ಪರೇಲ್ ನಲ್ಲಿರುವ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಹರ್ಷದ್ ಕೊರೋನದಿಂದ ದೇಶ ಮುಕ್ತವಾದ ಬಳಿಕ ಆಹ್ವಾನ ನೀಡಿದ ರಾಜ್ಯಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಕ್ಯಾರಂ ಜತೆಯಲ್ಲಿ ಪೇಟಿಂಗ್, ಈಜು ಮೊದಲಾದ ಸೃಜನಾತ್ಮಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕ್ಯಾರಂ ಕ್ರೀಡೆಯ ಮೂಲ ನಿಯಮ ಹರ್ಷಾದ್ ಅವರ ಮುನ್ನಡೆಗೆ ಅಡ್ಡಿಯಾಗಿರಬಹುದು, ಆದರೆ ಅವರ ಪ್ರತಿಭೆಗೆ ತಕ್ಕ ವೇದಿಕೆಯನ್ನು ಕಲ್ಪಿಸಿಕೊಡುವುದು ದೇಶದ ಕ್ಯಾರಂ ಫೆಡರೇಷನ್ ನ ಕರ್ತವ್ಯವಾಗಿದೆ.




