ಕೃಷಿವಿಶೇಷ

ಮೀನು ಸಾಕಾಣಿಕೆ ಲಾಭದಾಯಕ ಉದ್ಯಮ: ಕಡಿಮೆ ಬಂಡವಾಳ ಲಕ್ಷ ಲಕ್ಷ ಆದಾಯ!

ಮೀನು ಸಾಕಾಣಿಕೆ ಇವತ್ತು ಲಾಭದಾಯಕ ಉದ್ಯಮ. ಆಸಕ್ತಿಯಿಂದ ಇದನ್ನು ಶುರು ಮಾಡಿದ್ರೆ ಕಡಿಮೆ ಖರ್ಚಲ್ಲಿ ಲಕ್ಷಾಂತರ ರೂಪಾಯಿ ಆದಾಯಗಳಿಸೋದು ಕಷ್ಟವೇನಲ್ಲಾ. ಹಾಗಾದ್ರೆ ಬನ್ನಿ ಮೀನು ಸಾಕಾಣಿಕೆ ಮಾಡೋದು ಹೇಗೆ ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡ್ತೀವಿ.

ಮೀನು ಸಾಕಾಣಿಕೆ ಮಾಡೋ ಕೊಳದ ಆಳ ಕನಿಷ್ಠ 3 ರಿಂದ 4 ಅಡಿ ಇರ್ಬೇಕು.ಇಲ್ಲದಿದ್ರೆ ಸೂರ್ಯನ ಕಿರಣ ಭೂಮಿಗೆ ನೇರವಾಗಿ ತಲುಪಿ ಶಾಖ ಹೆಚ್ಚಾಗುತ್ತೆ.ಹೀಗಾದಲ್ಲಿ ನೀರಿನ ಆಮ್ಲಜನಕದ ಪ್ರಮಾಣ ಕಮ್ಮಿಯಾಗುತ್ತೆ. ಕೊಳದಲ್ಲಿ ಕಂಡು ಬರೋ ನಿರುಪಯೋಗಿ ಸಣ್ಣ ಜಾತಿಯ ಕಳೆ ಮೀನುಗಳು, ಮೀನು ಭಕ್ಷಕ ಪಕ್ಷಿಗಳು ಹಾಗೂ ಇತರ ಪ್ರಾಣಿಗಳಾದ ಕಪ್ಪೆ, ನೀರು ಹಾವುಗಳಿದ್ದರೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಇಲ್ಲದಿದ್ದರೆ ಇವು ಕೊಳದಲ್ಲಿರೋ ಮೀನಿನ ಮರಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.

ಕೊಳದಲ್ಲಿರೋ ಜೀವಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡೋದಕ್ಕೆ ಕೊಳದ ನೀರನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿದ್ರೆ ಅನಗತ್ಯ ಜೀವಿಗಳನ್ನು ಸಂಪೂರ್ಣ ನಾಶ ಮಾಡ್ಬೋದು. ಕೊಳದ ನೀರು ಬಸಿದು ಹೋಗದಂತಹ ಪರಿಸ್ಥಿತಿಯಲ್ಲಿ ಪದೇ ಪದೇ ಬಲೆ ಹಾಕೋದ್ರಿಂದ ಸ್ವಲ್ಪ ಮಟ್ಟಿಗೆ ಅನಗತ್ಯ ಮೀನುಗಳನ್ನು ನಿರ್ಮೂಲನೆ ಮಾಡಬಹುದು.  ಆದ್ರೆ ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆ ಮಾಡಲು ಮೀನಿಗೆ ವಿಷಕಾರಿಯಾದ ಹಿಪ್ಪೆ ಹಿಂಡಿ, ಟೀ ಬೀಜದ ಹಿಂಡಿ, ಬ್ಲೀಚಿಂಗ್ ಪೌಡರನ್ನು ನಿಗದಿತ ಪ್ರಮಾಣದಲ್ಲಿ ಉಪಯೋಗಿಸಬೇಕು.

ಕೊಳವನ್ನು ಸಾಕಾಣಿಕೆಗೆ ಸಜ್ಜುಗೊಳಿಸಿದ ನಂತ್ರ ಮೀನು ಮರಿ ಉತ್ಪಾದನಾ ಕೇಂದ್ರಗಳಿಂದ ಪಾಲಿಥೀನ್ ಚೀಲಗಳಲ್ಲಿ ತುಂಬಿ ತರಲಾಗೋ ಮೀನುಮರಿಗಳನ್ನು ಕೊಳಕ್ಕೆ ಬಿಡುವ ಮುನ್ನ ಎಚ್ಚರಿಕೆ ವಹಿಸದಿದ್ದರೆ, ಮೀನುಗಳು ಸಾಯಬಹುದು. ಹಾಗಾಗಿ ಮರಿಗಳಿಂದ ಕೂಡಿದ ಪಾಲಿಥೀನ್ ಚೀಲಗಳನ್ನು ಕೊಳದ ನೀರಿನಲ್ಲಿ ಐದಾರು ನಿಮಿಷಗಳ ಕಾಲ ಹಾಗೆಯೇ ತೇಲಿಬಿಡಬೇಕು. ನಿಧಾನವಾಗಿ ಚೀಲದ ಬಾಯಿ ಬಿಚ್ಚಿ, ಕೊಳದ ನೀರು ಚೀಲಕ್ಕೆ ಸ್ವಲ್ಪ ಸ್ವಲ್ಪವೇ ಹೋಗುವಂತೆ ಮಾಡಬೇಕು.

ಹೀಗೆ ಮರಿಗಳು ಕೊಳದ ನೀರಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ನಿಧಾನವಾಗಿ ಚೀಲವನ್ನು ಮೇಲೆತ್ತಿದಾಗ, ಮರಿಗಳು ತಾವಾಗಿಯೇ ಕೊಳದ ನೀರಿಗೆ ಸೇರಿಕೊಳ್ಳುತ್ತವೆ.  ಆತುರಾತುರವಾಗಿ ಚೀಲದ ಬಾಯಿಯನ್ನು ತೆಗೆದು ಆ ಮರಿಗಳನ್ನು ಕೊಳಕ್ಕೆ ಒಮ್ಮೆಲೇ ಸುರಿದು ಬಿಟ್ಟರೆ ಏಕಾಏಕಿ ಬದಲಾದ ವಾತಾವರಣದಿಂದ ಆಘಾತ ಅನುಭವಿಸಿ ಮರಿಗಳು ಸಾಯುವ ಸಾಧ್ಯತೆಗಳಿರುತ್ತವೆ.

ಮೀನು ಮರಿಗಳ ಸಂಖ್ಯೆ ಹೆಚ್ಚಿಗೆ ಇರುವಾಗ ಕೊಳದಲ್ಲಿ ಸಿಗುವ ನೈಸರ್ಗಿಕ ಆಹಾರದ ಜೊತೆಗೆ ಕೃತಕವಾಗಿ ಪ್ರತಿದಿನ ಆಹಾರ ನೀಡೋದು ಅವಶ್ಯಕ.  ಸಾಮಾನ್ಯವಾಗಿ 1:1 ಪ್ರಮಾಣದ ಅಕ್ಕಿ ತೌಡು ಮತ್ತು ಕಡಲೆಕಾಯಿ ಹಿಂಡಿಯ ಮಿಶ್ರಣವನ್ನು ಮೀನು ಮರಿ ಬಿಟ್ಟ ಎರಡನೇ ದಿನದಿಂದ ಕೊಡಬೇಕಾಗುತ್ತೆ. ಕೊಡುವ ಆಹಾರದ ಪ್ರಮಾಣವು ಮೀನುಗಳ ತೂಕದ ಮೇಲೆ ಅವಲಂಬಿತವಾಗಿರುತ್ತದೆ. 

ಸಾಮಾನ್ಯವಾಗಿ ಹೆಕ್ಟೇರಿಗೆ 5000 ಮೀನುಮರಿಗಳನ್ನು ಬಿಟ್ಟಿದ್ದರೆ ಅಕ್ಕಿ ತೌಡು ಮತ್ತು ಕಡಲೆಕಾಯಿ ಹಿಂಡಿಯ ಮಿಶ್ರಣವನ್ನು ಮೊದಲನೇ ತಿಂಗಳು ದಿವಸಕ್ಕೆ 4 ಕಿ.ಗ್ರಾಂ, 2ನೇ ತಿಂಗಳು 5 ಕಿ.ಗ್ರಾಂ, 3ನೇ ತಿಂಗಳು 6 ಕಿ.ಗ್ರಾಂ ಹಾಗೂ ನಂತರದ ಪ್ರತಿ ತಿಂಗಳು 2 ಕಿ.ಗ್ರಾಂ ಹೆಚ್ಚಿನ ಆಹಾರದಂತೆ 12 ತಿಂಗಳವರೆಗೆ ಕೊಡಬೇಕು. 

ಕೆರೆಯ ನೀರು ಯಾವಾಗಲೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ನೀರಿನಲ್ಲಿ ಕರಗಿರುವ ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಸಾಮಾನ್ಯವಾಗಿ ಬೆಳಗಿನ ಜಾವ ಮೀನುಗಳು ನೀರಿನ ಮೇಲ್ಭಾಗದಲ್ಲಿ ಆಮ್ಲಜನಕಕ್ಕೋಸ್ಕರ ಕಾಣಿಸಿಕೊಳ್ಳುತ್ತವೆ. ನೀರಿನ ಬಣ್ಣ ತೀರಾ ಹದಗೆಟ್ಟಿದ್ದರೆ ಹೆಚ್ಚು ಕಂದು, ಹೆಚ್ಚು ಹಸಿರು ಬಣ್ಣ ಹೊಂದಿದ್ದು, ಕೆಟ್ಟ ವಾಸನೆ ಬರುತ್ತಿದ್ದರೆ ಕೊಳದ ನೀರನ್ನು ಕಾಲು ಭಾಗ ಬಸಿದು ಹೊಸ ನೀರನ್ನು ಬಿಡಬೇಕು. ಇದಲ್ಲದೆ ತಿಂಗಳಿಗೊಮ್ಮೆ ನೀರನ್ನು ಪರೀಕ್ಷಿಸಿ ಅದರ ಗುಣ ಮತ್ತು ಫಲವತ್ತತೆಯನ್ನು ಸರಿಪಡಿಸುವುದು ಸೂಕ್ತ.

ಸಾಮಾನ್ಯವಾಗಿ ಮೀನುಗಳು ಮಾರಾಟ ಮಾಡುವ ಹಂತವನ್ನು ತಲುಪಿದಾಗ ಮೀನುಗಳನ್ನು ಬಲೆ ಉಪಯೋಗಿಸಿ ಹಿಡಿಯಬಹುದು. ಮೀನಿನ ಪಾಲನೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿದ್ದಲ್ಲಿ ಸುಮಾರು 1 ಹೆಕ್ಟೇರಿಗೆ 4 ಸಾವಿರ ಕಿ.ಗ್ರಾಂಗೂ ಅಧಿಕ ಇಳುವರಿ ಪಡೆಯಬಹುದು. 1500 ಕಿ.ಗ್ರಾಂ ಇಳುವರಿಯನ್ನು 6 ತಿಂಗಳಿಗೆ ಪಡೆಯಬಹುದು.

ಶ್ರಮಪಟ್ಟು ಮಾಡಿದರೆ ವರ್ಷಕ್ಕೆ 30 ರಿಂದ 40 ಟನ್ ಮೀನನ್ನು ಪಡೆಯಬಹುದು. ನೀರಿದ್ದರಂತೂ ಇನ್ನು ಅಧಿಕ ಪ್ರಮಾಣದಲ್ಲಿ ಮೀನನ್ನು ಸಾಕಬಹುದು ಅನ್ನೋದು ಅನುಭವಿಗಳ ಅಭಿಪ್ರಾಯ. ಮೀನಿನ ಬೆಲೆ ಕೃಷಿ ಬೆಳೆಯಂತೆ ಅಲ್ಲ. ಬೆಲೆಯಲ್ಲಿ ಏರಿಳಿತ ಇರೋದಿಲ್ಲ. ವರ್ಷಂಪ್ರತಿ ಒಂದೇ ಬೆಲೆ ಇರೋದ್ರಿಂದ ಟನ್ ಒಂದರಿಂದ ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸಬಹುದು. ಇನ್ಯಾಕೆ ತಡ ಮೀನು ಸಾಕಾಣಿಕೆ ಮಾಡೋಕೆ ಮುಂದಾಗಿ.

-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, BMG 24X7 ಲೈವ್ ಕನ್ನಡ

Related Articles

Leave a Reply

Your email address will not be published. Required fields are marked *

Back to top button