ವಿದ್ಯಾರ್ಥಿಗಳ ಅಭಿಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ

ತಾಂತ್ರಿಕವಾಗಿ ಕಾರ್ಯಸಾಧ್ಯವಾದ, ಶೈಕ್ಷಣಿಕವಾಗಿ ಸ್ಥಿರವಾದ, ಪರಿಸರದ ದೃಷ್ಟಿಯಿಂದ ಸಮರ್ಥನೀಯ ಮತ್ತು ಆರ್ಥಿಕವಾಗಿ ಸಾಧಿಸಲು ಯೋಗ್ಯ ಪ್ರಾಯೋಗಿಕ ಪರಿಹಾರಗಳು ಸದ್ಯದ ಅವಶ್ಯಕತೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ ಆರ್ ತಿಳಿಸಿದರು. ಅವರು ಪರಿಸರ ವಿಜ್ಞಾನ ವಿಭಾಗ ಆಯೋಜಿಸಿದ್ದ ವಿದ್ಯಾರ್ಥಿಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಮತೋಲನದಲ್ಲಿ ರಾಜಿಯಾಗದೆ, ತಾಂತ್ರಿಕ ಪ್ರಗತಿಯನ್ನು ಸಂಯೋಜಿಸುವ ಮೂಲಕ ಪರಿಸರವನ್ನು ರಕ್ಷಿಸುವ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಕುಲಪತಿಗಳು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಕೊಟ್ರೇಶ್ ಎಂ ಮಾತನಾಡಿ, ಭಾರತದ ಸಾಂಸ್ಕೃತಿಕ ವಿಕಾಸದಲ್ಲಿ ಪರಿಸರ ಪ್ರಜ್ಞೆಯ ಕುರಿತು ವಿವರಿಸುತ್ತಾ, ಪರಿಸರ ಸಂರಕ್ಷಣಾ ಅಭ್ಯಾಸಗಳ ಐತಿಹಾಸಿಕ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ವಿಜ್ಞಾನ ನಿಖಾಯದ ಡೀನ್ ಪ್ರೊ. ವಿ ವಿ ಸುರೇಶ್ ಬಾಬು ಅವರು ಜ್ಞಾನಭಾರತಿ ಪರಿಸರವನ್ನು ವಿಜ್ಞಾನ ವಿದ್ಯಾರ್ಥಿಗಳ ಪ್ರಯೋಗಶಾಲೆ ಯಾಗಿ ಅಭಿವೃದ್ದಿ ಪಡಿಸಬೇಕು ಎಂದರು.
ಮುಖ್ಯ ಭಾಷಣಕಾರ, ಖ್ಯಾತ ಕಾದಂಬರಿಕಾರ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಾ.ಕೆ.ಎನ್. ಗಣೇಶಯ್ಯ ಅವರು ‘ಮಾನವ ನಾಗರಿಕತೆಯನ್ನು ಉಳಿಸಿಕೊಳ್ಳುವ ಅದೃಶ್ಯ ಎಳೆಗಳು’ ಕುರಿತು ಮಾತನಾಡಿದರು. ತಕ್ಷಣದ ಪ್ರಯೋಜನಗಳಿಗೆ ಆದ್ಯತೆ ನೀಡುವ ಬದಲು ಒಟ್ಟಾರೆಯಾಗಿ ಪ್ರಕೃತಿಯನ್ನು ಸಂರಕ್ಷಿಸಲು ನಾವು ಒತ್ತು ನೀಡಬೇಕು. ಪರಿಸರ ಸಂಬಂಧಗಳನ್ನು ಶ್ಲಾಘಿಸುವುದು ಮತ್ತು ಅದರ ಸಂಕೀರ್ಣ ಸಂಬಂಧವನ್ನು ಗುರುತಿಸುವುದು ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆಯಾಗಬೇಕು ಎಂದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ಹಳೆ ವಿದ್ಯಾರ್ಥಿಗಳು ‘ಉದ್ಯಮಗಳಲ್ಲಿ ಪರಿಸರ, ಆರೋಗ್ಯ ಮತ್ತು ಸುರಕ್ಷತೆ ಕ್ಷೇತ್ರದಲ್ಲಿನ ಅವಕಾಶಗಳು’ ಕುರಿತು ಚರ್ಚೆ ನಡೆಸಿದರು. ಹಳೆ ವಿದ್ಯಾರ್ಥಿಗಳಾದ ಡಾ.ಸುನೀಲ್. ಸಿ, ಡಾ. ಕೃಷ್ಣಕಾಂತ್. ಬಿ.ಎನ್. ಮತ್ತು ಶ್ರೀ ರಂಜನ್ ಹೆಬ್ಬಾರ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೌಶಲ್ಯಗಳ ಅಭಿವೃದ್ದಿ ಮತ್ತು ನೆಟ್‌ವರ್ಕಿಂಗ್, ಶೈಕ್ಷಣಿಕ ಜ್ಞಾನದ ಪ್ರಾಯೋಗಿಕ ಉಪಯೋಗ ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶಗಳ ಕುರಿತು ಅವರು ಚರ್ಚೆ ನಡೆಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ಬಿ. ಸಿ. ನಾಗರಾಜ್ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಡಾ. ಕೆ ಎಲ್ ಪ್ರಕಾಶ್ ವಂದಿಸಿದರು. ವಿಶ್ವವಿದ್ಯಾಲಯದ ಇತರ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು, ಪರಿಸರ ವಿಜ್ಞಾನ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




