ಮೈದುಂಬಿ ಹರಿಯುತ್ತಿದೆ ಅಣಶಿ ಜಲಪಾತ : ಜಲರಾಶಿ ನೋಡಿ ಪ್ರವಾಸಿಗರು ಫುಲ್ ಖುಷ್

ಕಾರವಾರ : ಮಳೆಗಾಲ ಆರಂಭವಾಯ್ತು ಅಂದ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ ಜಲಪಾತಗಳು ಮೈದುಂಬಿಕೊಳ್ಳುತ್ತವೆ.ಒಂದಕ್ಕಿಂತ ಇನ್ನೊಂದು ನಯನ ಮನೋಹರವಾಗಿರುವ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅದರಲ್ಲೂ ಇದೀಗ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಹೆದ್ದಾರಿಗೆ ಸಮೀಪದಲ್ಲೇ ಇರುವ ಜಲಪಾತವೊಂದು ಇದೀಗ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಕಾರವಾರದಿಂದ ಜೊಯಿಡಾಕ್ಕೆ ತೆರಳುವ ಮಾರ್ಗದ ಅಣಶಿ ಘಟ್ಟ ಪ್ರದೇಶದಲ್ಲಿ ಇಂತಹದ್ದೊಂದು ನಯನ ಮನೋಹರ ಜಲಪಾತ ಕಾಣ ಸಿಗುತ್ತದೆ. ಮಳೆಗಾಲವಾದ್ದರಿಂದ ಹಚ್ಚ ಹಸಿರಿನಿಂದ ಆವೃತವಾದ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದೇ ಸವಾರರಿಗೆ ಒಂದು ರೀತಿಯ ಮುದವನ್ನು ನೀಡುತ್ತದೆ. ಅಂಥದ್ರಲ್ಲಿ ರಸ್ತೆಗೆ ಹೊಂದಿಕೊಂಡೇ ಕಾಣಸಿಗುವ ಈ ಜಲಪಾತಕ್ಕೆ ಮನಸೋತ ವಾಹನ ಸವಾರರು ಕ್ಷಣಕಾಲ ಇಲ್ಲಿ ನಿಂತುಕೊಂಡು ಎತ್ತರದಿಂದ ಧುಮ್ಮಿಕ್ಕುವ ಜಲರಾಶಿ ಕಣ್ತುಂಬಿಕೊಂಡು ತೆರಳುತ್ತಿದ್ದಾರೆ.
ಜಲಪಾತಗಳ ತವರೂರು:
ಅಣಶಿ ಜಲಪಾತ ಕಾರವಾರದಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿದ್ದು,ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತದೆ.ಅದರಲ್ಲೂ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ನದಿ, ಹಳ್ಳಗಳ ಜೊತೆಗೆ ಜಲಪಾತಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿದೆ. ಉತ್ತರಕನ್ನಡ ಜಲಪಾತಗಳ ತವರೂರು ಅಂತಲೇ ಕರೆಸಿಕೊಳ್ಳುವ ಜಿಲ್ಲೆಯಾಗಿದ್ದು, ಹತ್ತು ಹಲವು ಜಲಪಾತಗಳನ್ನು ಒಳಗೊಂಡಿದೆ.
ವೀಕ್ಷಣೆಗೆ ಮಾತ್ರ ಅವಕಾಶ:
ಈ ಬಾರಿ ಅಪ್ಪಳಿಸಿದ ನೆರೆ ಹಾಗೂ ಕೊರೊನಾ ಅಬ್ಬರದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು.ಇದೀಗ ಮಳೆಯ ಪ್ರಮಾಣ ಸಹ ಕೊಂಚ ಕಡಿಮೆಯಾಗಿದ್ದು,ಜಿಲ್ಲೆಯ ಪ್ರವಾಸಿ ತಾಣಗಳಿಗೆ ಯಾವುದೇ ನಿಷೇಧ ಇಲ್ಲದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಪಾತಕ್ಕೆ ಇಳಿಯುವ ಮಾರ್ಗವನ್ನು ಬಂದ್ ಮಾಡಲಾಗಿದ್ದು, ವೀಕ್ಷಣೆಗೆ ಮಾತ್ರ ಅವಕಾಶವಿದೆ. ಹೀಗಾಗಿ ಮಹಿಳೆಯರು,ಮಕ್ಕಳು ಸಹ ಸುರಕ್ಷಿತವಾಗಿ ಜಲಪಾತದ ಸೌಂದರ್ಯವನ್ನು ಸವಿಯಬಹುದಾಗಿದೆ.




