
ಚಂಡೀಗಢ: ತಿಂಗಳ ಹಿಂದೆಯಷ್ಟೇ ಗಾಂಧಿ-ನೆಹರು ಕುಟುಂಬದ ಕೃಪಾಕಟಾಕ್ಷದಿಂದ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಮೇಲುಗೈ ಸಾಧಿಸಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಈಗ ಈ ನಿಟ್ಟಿನಲ್ಲಿ ಸ್ವಲ್ಪ ಹಿನ್ನಡೆಯಾದಂತಿದೆ.
ಕಳೆದ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೇರಿಸಿದ್ದ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನಡುವೆ ಹೆಚ್ಚುತ್ತಿರುವ ಮನಸ್ತಾಪದ ಹಿನ್ನೆಲೆಯಲ್ಲಿ ದೂರು ನೀಡಲು ಮುಂದಾಗಿರುವ ಸಿಧು ಭೇಟಿಗೆ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಕೋರಿದ ಶಾಸಕರ ಪಟ್ಟಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವದೆಹಲಿಗೆ ಹೋದ ಸಿಧು ಬರಿಗೈಯಲ್ಲಿ ಬರುವಂತಾಗಿದೆ.
ಆಗಸ್ಟ್ 27ರಂದು ಅಮೃತಸರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ, ತಮಗೆ ಮುಕ್ತ ಹಸ್ತ ನೀಡಿದರೆ ಕಾಂಗ್ರೆಸ್ನ್ನು ಇನ್ನೂ 20 ವರ್ಷ ಅಧಿಕಾರಕ್ಕೆ ತರುತ್ತೇನೆ. ಇಲ್ಲವಾದರೆ ನನ್ನ ದಾರಿ ನನಗೆ ಎನ್ನುವ ಅರ್ಥದ ಮಾತುಗಳನ್ನಾಡಿದ್ದರು. ಈ ಕುರಿತು ಸಿಎಂ ಅಮರೀಂದರ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪಂಜಾಬ್ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್, ಕ್ಯಾಪ್ಟನ್ ಅವರನ್ನು ಭೇಟಿಯಾಗಿ ಸಮಾಧಾನಪಡಿಸಿದ್ದರು.




