
ದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನೇತಾರ, ರಾಹುಲ್ ಗಾಂಧಿ ಬಲಗೈ ಬಂಟ ಆರ್ ಪಿ ಎನ್ ಸಿಂಗ್ ಮಂಗಳವಾರ ಕಾಂಗ್ರೆಸ್ಸಿಗೆ ರಾಜಿನಾಮೆ ನೀಡಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಂಗ್ ಅವರ ಬಿಜೆಪಿ ಸೇರ್ಪಡೆ, ಕಾಂಗ್ರೆಸ್ ಪಕ್ಷದ ಮಟ್ಟಿಗೆ ದೊಡ್ಡ ಆಘಾತ ಅಥವಾ ಹಿನ್ನೆಡೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಆರ್ ಪಿಎನ್ ಸಿಂಗ್ ಸಿಡಬ್ಲ್ಯೂಸಿ ಸದಸ್ಯ ಮತ್ತು ಎಐಸಿಸಿ ಪದಾಧಿಕಾರಿಯಾಗಿದ್ದರು. ಯುಪಿಎ 2 ಸರ್ಕಾರದಲ್ಲಿ ಅವರು ಕೇಂದ್ರದಲ್ಲಿ ರಾಜ್ಯ ಸಚಿವರಾಗಿದ್ದರು.
ತಮ್ಮ ರಾಜಿನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಟ್ವೀಟ್ ಮಾಡಿರುವ ಅವರು, ನಾವು ನಮ್ಮ ಮಹಾನ್ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನನ್ನ ರಾಜಕೀಯ ಪ್ರಯಾಣದಲ್ಲಿ ನಾನು ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇನೆ. ಎಂದಿದ್ದಾರೆ.
ಇದಾದ ಸ್ವಲ್ಪ ಹೊತ್ತಿನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಆರ್ ಪಿಎನ್ ಸಿಂಗ್ ಇದು ನನಗೆ ಹೊಸ ಆರಂಭ ಮತ್ತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ನನ್ನ ಕೊಡುಗೆಯನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಆರ್ ಪಿ ಎನ್ ಸಿಂಗ್ ನಿರ್ಗಮನ, ಉತ್ತರ ಪ್ರದೇಶ ಚುನಾವಣೆ ಮೇಲೆ ಅಂತಹ ಪ್ರಭಾವ ಬೀರದು. ಏಕೆಂದರೆ ಅವರು ಮೂಲತಃ ಉತ್ತರ ಪ್ರದೇಶದವರಲ್ಲ ಎನ್ನಲಾಗಿದೆ.
