
ಭುವನೇಶ್ವರ: ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತೀಯ ಪುರುಷರ ಹಾಕಿ ತಂಡ, ನಾಲ್ಕು ದಶಕಗಳ ಬಳಿಕ ಅಭೂತಪೂರ್ವ ಸಾಧನೆ ಮಾಡಿದಾಗ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ದೇಶಾದ್ಯಂತ ಹೊಗಳಿಕೆಯ ಸುರಿಮಳೆ ಆಯಿತು. ಆದರೆ, ಆದರ ಹಿಂದಿದ್ದ ರೂವಾರಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ನಸುನಗುತ್ತಾ ಸುಮ್ಮನೆ ಕುಳಿತಿದ್ದರು.
ಈಗ ರಾಜಕೀಯವಾಗಿಯೂ ಅವರು ಹೊಸದೊಂದು ದಾಳವನ್ನು ಸದ್ದಿಲ್ಲದೆ ಉರುಳಿಸುತ್ತಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜು ಜನತಾ ದಳದಿಂದ ಶೇ. 27ರಷ್ಟು ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಟ್ನಾಯಕ್ ನಿರ್ಧರಿಸಿದ್ದಾರೆ. ಮೊದಲ ಹಂತವಾಗಿ ಪಂಚಾಯತ್ ಚುನಾವಣೆ (ಬೆಂಬಲಿತ ಅಭ್ಯರ್ಥಿಗಳು)ಯಿಂದಲೇ ಈ ಪ್ರಯೋಗ ಆರಂಭವಾಗಲಿದೆ.
ಈ ವಿಷಯವನ್ನು ಹಿಂದುಳಿದ ವರ್ಗಕ್ಕೆ ಸೇರಿರುವ ಅಲ್ಲಿನ ಆಹಾರ ಪೂರೈಕೆ ಮತ್ತು ಗ್ರಾಹಕ ಕಲ್ಯಾಣ ಸಚಿವ ರಣೇಂದ್ರ ಪ್ರತಾಪ್ ಸ್ವಾನ್ ಮತ್ತು ಉನ್ನತ ಶಿಕ್ಷಣ ಸಚಿವ ಅರುಣ್ ಸಾಹೂ ಘೋಷಿಸಿದ್ದಾರೆ.
ನ್ಯಾಯಾಲಯದ ನಿರ್ಬಂಧ ಇರುವುದರಿಂದ ಇಷ್ಟು ಪ್ರಮಾಣದಲ್ಲಿ ಮಾತ್ರ ಮೀಸಲಾತಿ ನೀಡಲು ಸಾಧ್ಯ ಎಂದಿರುವ ಅವರು, ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಶೇ. 33ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಸಲು ಪಟ್ನಾಯಕ್ ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ಪಟ್ನಾಯಕ್ ನಡೆಯನ್ನು ಟೀಕಿಸಿವೆ. ಇದೊಂದು ಚುನಾವಣೆ ಗಿಮಿಕ್ ಎಂದು ಎರಡೂ ಪಕ್ಷಗಳು ಹೇಳಿವೆ.




