
ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಬೀಗ ಜಡಿಯಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಒಬ್ಬ ಮಂತ್ರಿ ಇಲ್ಲ. ಯಾವುದೇ ಮಂತ್ರಿ ಅಧಿಕಾರಿಗಳ ಜತೆ ಒಂದು ಮೀಟಿಂಗ್ ಮಾಡಿಲ್ಲ. ಜನರ ಕಷ್ಟ-ಸುಖ ಕೇಳುವವರು ಇಲ್ಲ. ಎಲ್ಲಕ್ಕಿಂತ ಅವರಿಗೆ ಚುನಾವಣೆ ಬಹಳ ಮುಖ್ಯವಾಗಿ ಬಿಟ್ಟಿದೆ ಎಂದರು.
ಮುಖ್ಯಮಂತ್ರಿಯಾದವರು ಉಪಚುನಾವಣೆ ಒಮ್ಮೆ ಅಥವಾ ಎರಡು ಬಾರಿ ಬಂದು ಪ್ರಚಾರ ಮಾಡಿ ಹೋಗುವುದು ವಾಡಿಕೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲೇ ಠಿಕಾಣಿ ಹೂಡಿದ್ದಾರೆ ಎಂದರೆ ಚುನಾವಣೆಯಲ್ಲಿ ಸೋಲುವ ಭೀತಿ ಅವರಿಗೆ ಎಷ್ಟು ಕಾಡುತ್ತಿದೆ ಎಂಬುದನ್ನು ಅಂದಾಜಿಸಬಹುದು ಎಂದು ಶಿವಕುಮಾರ್ ಹೇಳಿದರು.
ಸಿಂದಗಿ ಮತ್ತು ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಶೇ.ನೂರರಷ್ಟು ಅಲ್ಲ ಶೇ.ಇನ್ನೂರರಷ್ಟು ಭಾರಿ ಅಂತರದೊಂದಿಗೆ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರ ವೇಳೆ ಜನರ ಒಲವು ಕಾಂಗ್ರೆಸ್ ಪಕ್ಷದತ್ತ ಇದೆ ಎಂಬುದಕ್ಕೆ ವ್ಯಕ್ತವಾಗುತ್ತಿರುವ ಜನಬೆಂಬಲವೇ ಸಾಕ್ಷಿ ಎಂದರು.




