Latestಅಂಕಣಗಳುರಾಜಕೀಯ

B S Yediyurappa: ಸಿಗುವುದೇ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ?

ಜಿ.ಮುಮ್ತಾಜ್ ಅಲೀಮ್

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆದರೆ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂಬುದು ಈಗಲೂ ಕೆಲವರ ಆಸೆ. ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ. ಪಕ್ಷ ವರಿಷ್ಠರು ನಾಯಕತ್ವ ಬದಲಾವಣೆ ಸಂಬಂಧ ಈವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡದಿರುವುದೇ ಇದಕ್ಕೆ ಕಾರಣ.

ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟುವಾಗ ತಮ್ಮಷ್ಟಕ್ಕೆ ತಾವಿದ್ದ ಲಿಂಗಾಯುತ ಮಠಾಧೀಶರು ಈಗ ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇವತ್ತು ಭಾನುವಾರ ಅವರು ಬಿಎಸ್ ವೈ ಪರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹಿಂದೆ ಇದೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಾಗಲೂ ಅವರ ಸುತ್ತ ಕಂಡುಬಂದದ್ದೂ ಬೆರಳೆಣಿಕೆಯಷ್ಟು ಮಠಾಧೀಶರು ಮಾತ್ರ ಎಂಬುದು ಇಲ್ಲಿ ಗಮನಾರ್ಹ. ಈಗ ಬಿಸ್ವೈ ಅವರಿಂದ ತಾವು ಪಡೆದಿರಬಹುದಾದ ಕಾಣಿಕೆಯ ಋಣ ತೀರಿಸಲೆಂದೇ ಒತ್ತಡತಂತ್ರದ ಪ್ರಹಸನ ನಡೆಸಲಾಗುತ್ತಿದೆ ಎನ್ನುವ ಕಟುಟೀಕೆಗಳಲ್ಲಿ ಹುರುಳು ಇಲ್ಲದಿಲ್ಲ.

ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಕ್ರಾಂತಿಯೋಗಿ ಬಸವಣ್ಣ ಅವರ ಅನುಯಾಯಿಗಳು ಎನಿಸಿಕೊಳ್ಳುವ ಸ್ವಾಮೀಜಿಗಳ ಈ ನಡೆ ಪ್ರಶ್ನಾರ್ಹವಾಗಿದೆ. ಆದರೂ ಮಠಾಧೀಶರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಾಯಕಜೀವಿಗಳಾಗಿ ಸಮಾಜವನ್ನು ಸನ್ಮಾರ್ಗದೆಡೆ ಕರೆದೊಯ್ಯಬೇಕಾದ ಮಠಾಧೀಶರು ನೇರ ರಾಜಕಾರಣಕ್ಕಿಳಿದು ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಸರ್ವಥಾ ಸರಿಯಾದುದಲ್ಲ ಎಂಬ ಅಭಿಪ್ರಾಯ ಪ್ರಾಜ್ಞ ವಲಯದಲ್ಲಿ ಮನೆ ಮಾಡಿದೆ.

ತಾತ್ಕಾಲಿಕ ರಿಲೀಫ್ ?

ತಮ್ಮ ಒತ್ತಡಕ್ಕೆ ಮಣಿದು ಬಿಜೆಪಿ ವರಿಷ್ಠರು ಕೊನೆ ಕ್ಷಣದಲ್ಲಿ ಏನಾದರೂ ಬದಲಾವಣೆ ಮಾಡಿದರೂ ಮಾಡಿಯಾರು ಎಂಬ ಆಸೆ ರಾಜಕಾರಣಕ್ಕಿಳಿದಿರುವ ಕಾವಿಪಡೆಯದ್ದು. ಆದರೆ ಇದಕ್ಕೆ ಬಗ್ಗುವ ಯಾವುದೇ ಸೂಚನೆ ಅಥವಾ ಸಂಕೇತ ಕೇಸರಿ ಪಕ್ಷದ ವರಿಷ್ಠರಿಂದ ವ್ಯಕ್ತವಾಗಿಲ್ಲ. ಒಂದು ಪಕ್ಷ ಮಠಾಧೀಶರ ಒತ್ತಡಕ್ಕೆ ಮಣಿದರೂ ಬಿಎಸ್ ವೈ ಪಾಲಿಗೆ ಅದು ಕೇವಲ ತಾತ್ಕಾಲಿಕ ರಿಲೀಫ್ ಆಗುವ ಸಾಧ್ಯತೆ ಇದೆ. ಏಕೆಂದರೆ ಪರ್ಯಾಯ ನಾಯಕತ್ವದ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವ ಅನಿವಾರ್ಯತೆ ವರಿಷ್ಠರ ಮುಂದೆ ಇದ್ದೇ ಇದೆ.

ನಿಶ್ಚಯವಾಗಿತ್ತು ಶರಣಾಗತಿ ಸೂತ್ರ

ಆದರೆ ಸಿಎಂ ಯಡಿಯೂರಪ್ಪ ಮಾತ್ರ ಅಧಿಕಾರ ಉಳಿಸಿಕೊಳ್ಳುವ ಅತಿರೇಕಕ್ಕೆ ಕೈಹಾಕಿಲ್ಲ. ಬದಲಿಗೆ ಪಕ್ಷ ವರಿಷ್ಠರ ಮುಂದೆ ಶರಣಾಗತಿ ಸೂತ್ರಕ್ಕೆ ಅವರು ಮುಂದಾಗಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮುನ್ನವೇ ಪಕ್ಷ ವರಿಷ್ಠರೊಂದಿಗೆ ಒಂದು ಒಪ್ಪಂದಕ್ಕೆ ಬಂದಿದ್ದರು. ಅದರ ಪ್ರಕಾರ ಎರಡು ವರ್ಷ ಅಧಿಕಾರ ನಡೆಸಿದ ತರುವಾಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜ್ಯದಲ್ಲಿ ಪಕ್ಷದ ಪರ್ಯಾಯ ನಾಯಕತ್ವಕ್ಕೆ ಬೆಂಬಲ ನೀಡುವುದೇ ಅದರ ತಿರುಳಾಗಿತ್ತು.

ಯಡಿಯೂರಪ್ಪ ಅವರಿಗೆ 75 ವರ್ಷಗಳಾದರೂ ಅವರಿಗೆ ಮುಖ್ಯಮಂತ್ರಿಯಾಗಲು ಪಕ್ಷದ ಹೈಕಮಾಂಡ್ ಅವಕಾಶ ಕಲ್ಪಿಸಿತ್ತು. ಈಗ ಅವಧಿಪೂರ್ಣಗೊಳಿಸಲು ಅವಕಾಶ ನೀಡಿದರೆ ಅವರ ವಯಸ್ಸು 80ನ್ನು ಮೀರುತ್ತದೆ. ನಂತರ ಚುನಾವಣೆ ಮುಂದಿಟ್ಟುಕೊಂಡು ಉದ್ಭವಿಸಬಹುದಾದ ದಿಢೀರ್ ನಾಯಕತ್ವದ ಮೂಲಕ ಪಕ್ಷವನ್ನು ಬೆಳೆಸಲು ಸಾಧ್ಯವಿಲ್ಲ. ಹೀಗಾಗಿ ವಯಸ್ಸಿನ ಕಾರಣ ಹಾಗೂ ರಾಜ್ಯದಲ್ಲಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು.

ರೇಸ್ ನಲ್ಲಿ ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ, ಸಿ.ಟಿ.ರವಿ

ಹಾಗಿದ್ದರೆ ಯಡಿಯೂರಪ್ಪ ಅವರ ಗೌರವಯುತ ನಿರ್ಮಮನದ ಬಳಿಕ ಪರ್ಯಾಯ ನಾಯಕತ್ವಕ್ಕೆ ಯಾರು ಎಂಬ ಪ್ರಶ್ನೆಗೆ ಹಲವು ಹೆಸರುಗಳು ಈಗಾಗಲೇ ಚಾಲ್ತಿಯಲ್ಲಿವೆ. ಅಂತಿಮವಾಗಿ ಪ್ರಹ್ಲಾದ್ ಜೋಷಿ, ಸಿ.ಟಿ.ರವಿ ಹಾಗೂ ಮುರುಗೇಶ್ ನಿರಾಣಿ ಅವರ ಹೆಸರುಗಳು ಅತ್ಯಂತ ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಮೂವರಲ್ಲಿ ಯಾರಿಗೇ ಪಟ್ಟಕಟ್ಟಿದರೂ ಮುಂಬರುವ ಚುನಾವಣೆಯಲ್ಲಿ ಇವರು ಪಕ್ಷಕ್ಕೆ ಗೆಲುವು ತಂದುಕೊಡಬಲ್ಲರೇ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಬಿಎಸ್ವೈ ನಿರ್ಗಮನದ ತರುವಾಯ ಪಕ್ಷಕ್ಕೆ ಒಂದು ಉತ್ತಮ ತಳಹದಿ ಅಥವಾ ಭದ್ರಬುನಾದಿ ಹಾಕಲು ವಿಫುಲ ಅವಕಾಶ ಸಿಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಅವರಿಗೆ ಸವಾಲು ಮತ್ತು ಸಾಮರ್ಥ್ಯದ ಕೆಲಸವೇ ಸೈ.

ಇನ್ನು ರಾಜ್ಯಪಾಲ ಹುದ್ದೆ ಬಗ್ಗೆ ಯಡಿಯೂರಪ್ಪರಿಂದ ನಿರಾಸಕ್ತಿ ವ್ಯಕ್ತವಾಗಿದೆ. ತಮ್ಮ ಮಕ್ಕಳ ಉತ್ತಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷ ಸಂಘಟನೆ ಕಡೆಗೆ ಅವರು ಹೆಚ್ಚಿನ ಒತ್ತು ನೀಡಲು ಬಯಸಿದ್ದಾರೆ. ಆ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎನ್ನುತ್ತಿದ್ದಾರೆ.

ಪಕ್ಷದ ಮೇಲೆ ಹಿಡಿತವನ್ನಿಟ್ಟುಕೊಳ್ಳುವ ಹಂಬಲ

ಈ ಮೂಲಕ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಇಟ್ಟುಕೊಳ್ಳುವುದು ಹಾಗೂ ತಮ್ಮ ಇಬ್ಬರು ಪುತ್ರರ ಪೈಕಿ ಒಬ್ಬರಿಗೆ ಡಿಸಿಎಂ ಅಥವಾ ಬೇರೆ ಹುದ್ದೆಯನ್ನು ದಕ್ಕಿಸುವ ಮತ್ತೊಬ್ಬ ಮಗನಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ದೊರಕಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಅಲ್ಲಗೆಳೆಯಲು ಯಾವುದೇ ಕಾರಣಗಳು ಇಲ್ಲ. ಪಕ್ಷ ವರಿಷ್ಠರು ಬಿಎಸ್ವೈ ಅವರ ಈ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಲೂಬಹುದು. ಯಡಿಯೂರಪ್ಪ ಅವರಲ್ಲಿ ಬಿಜೆಪಿಯಿಂದ ಹೊರಬಂದು ಮತ್ತೆ ಹೊಸ ಪಕ್ಷ ಕಟ್ಟುವ ಕಸುವು ಅಥವಾ ಚೈತನ್ಯ ಉಳಿದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಹಿಂದೊಮ್ಮೆ ಅವರು ಜೆಡಿಎಸ್ ನತ್ತ ಕಣ್ಣು ಹಾಯಿಸಿದ್ದರು. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಆ ಸಾಧ್ಯತೆಯೂ ಕಡಿಮೆ.

ನಾಲ್ಕುಬಾರಿ ಮುಖ್ಯಮಂತ್ರಿಗಿರಿಯ ಅವಕಾಶ

ನಾಲ್ಕುಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಪಡೆದ ಹೆಗ್ಗಳಿಕೆ ಯಡಿಯೂರಪ್ಪ ಪಾಲಿಗೆ ಇದ್ದೇ ಇದೆ. ಮೊದಲೆರಡು ಬಾರಿ ಅವರು ಮೂರು ದಿನ ಮತ್ತು ವಾರ ಒಪ್ಪತ್ತಿಗಷ್ಟೆ ಸಿಎಂ ಆಗಿದ್ದರು. ಒಮ್ಮೆ ಮೂರು ವರ್ಷ ಅಧಿಕಾರ ಚಲಾಯಿಸುವ ಯೋಗ ಪಡೆದರೂ ಆಗಲೂ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಈ ಬಾರಿ ಗೌರಯುತ ನಿರ್ಗಮನಕ್ಕೆ ವೇದಿಕೆ ಸಜ್ಜುಗೊಂಡಿದೆ ಅಷ್ಟೇ.

ಈ ಹಿಂದೆ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಾಗ ಪಟ್ಟು ಹಿಡಿದು ಡಿ.ವಿ.ಸದಾನಂದಗೌಡರನ್ನು ಮುಖ್ಯಮಂತ್ರಿಯಾನ್ನಾಗಿಸುವಲ್ಲಿ ಸಫಲರಾಗಿದ್ದರು. ಸರಿಕಂಡು ಬರದ ಕಾರಣ ತದನಂತರದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಈಗ ಸಿಎಂ ಸ್ಥಾನಕ್ಕೆ ಯಾರನ್ನೂ ತರಬೇಕು ಎಂದು ಪಟ್ಟು ಹಿಡಿಯುವ ಸ್ಥಿತಿಯಲ್ಲಿ ಬಿಎಸ್​​ವೈ ಇಲ್ಲ.

ಒಟ್ಟಾರೆ ರಾಜ್ಯದ ಪ್ರಸಕ್ತ ಪರಿಸ್ಥಿತಿಯಲ್ಲಿ ರಾಜ್ಯದ ಅತ್ಯಂತ ಪ್ರಭಾವಿ ಹಾಗೂ ಮಾಸ್ ಲೀಡರ್ ಗಳಲ್ಲಿ ಒಬ್ಬರಾಗಿರುವ ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆ ಕುತೂಹಲಕಾರಿಯಾಗಿದೆ. ಹಾಗೆಯೇ ಯಡಿಯೂರಪ್ಪರನ್ನು ಹೊರತುಪಡಿಸಿದ ಬಿಜೆಪಿ ಪಡೆಯ ರಾಜಕೀಯ ಭವಿಷ್ಯ ಕೂಡ. ಕೇಸರಿ ನಾಯಕರು ಯಾವ ಸೂತ್ರ ಅನುಸರಿಸುತ್ತಾರೆ. ಅದರಿಂದ ಉಂಟಾಗುವ ರಾಜಕೀಯ ಪರಿಣಾಮ ಮತ್ತು ಬೆಳವಣಿಗೆಗಳೇನು ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button