ಪ್ಯಾರಾಲಿಂಪಿಕ್ಸ್ಗೆ ಭಾರತದ 24 ಸ್ಪರ್ಧಿಗಳು

ಹೊಸದಿಲ್ಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಭಾರತದ ತಂಡದಲ್ಲಿ 24 ಕ್ರೀಡಾಪಟುಗಳು ಸೇರಿದ್ದಾರೆ. ಪದಕ ಗೆಲ್ಲುವ ಫೇವರಿಟ್ ಜಾವಲಿನ್ ಎಸೆತಗಾರ ದೇವೇಂದ್ರ ಝಝಾರಿಯಾ ಮತ್ತು ರಿಯೋದಲ್ಲಿ ಚಿನ್ನ ವಿಜೇತ ಮಾರಿಯಪ್ಪನ್ ತಂಗವೇಲು ಸೇರಿದ್ದಾರೆ. ಮಾರಿಯಪ್ಪನ್ ಪಥ ಸಂಚಲನದಲ್ಲಿ ಭಾರತದ ಧ್ವಜವನ್ನು ಹಿಡಿದು ಮುನ್ನಡೆಸಲಿದ್ದಾರೆ. ಆಗಸ್ಟ್ 24 ರಿಂದ ಪ್ಯಾರಾಲಿಂಪಿಕ್ಸ್ ಕ್ರೀಡೆಗಳು ಆರಂಭಗೊಳ್ಳಲಿವೆ.
ಕರ್ನಾಟಕದ ಕೋಚ್ ಸತ್ಯನಾರಾಯಣ: ಲಂಡನ್ ಮತ್ತು ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೋಚ್ ಕರ್ನಾಟಕದ ಸತ್ಯನಾರಾಯಣ ಅವರು ತರಬೇತಿ ನೀಡಿದ ಏಳು ಮಂದಿ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಈ ಬಾರಿ ಕರ್ನಾಟಕದ ಸ್ಪರ್ಧಿಗಳು ಪ್ಯಾರಾಲಿಂಪಿಕ್ಸ್ ಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.

ಅಥ್ಲೀಟ್ ಗಳಿಗೆ ವಿದೇಶದಲ್ಲಿ ತರಬೇತಿ ನೀಡಲು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ಮಾತನಾಡಿದ ಸತ್ಯನಾರಾಯಣ, “ಈ ಬಾರಿ ಆಯ್ಕೆ ಟ್ರಯನ್ ಅತ್ಯಂತ ಶಿಸ್ತಿನಲ್ಲಿ ನಡೆದಿದೆ, ಪಿಸಿಐ ಅಧ್ಯಕ್ಷರು ಮತ್ತು ಸ್ವತಃ ಪ್ಯಾರಾಲಿಂಪಿಕ್ ಪದಕ ವಿಜೇತೆ ಡಾ. ದೀಪಾ ಮಲಿಕ್ ಅವರ ಸಮ್ಮುಖದಲ್ಲಿ ನಡೆದಿದೆ. ನೈಜ ಸಾಧಕರಿಗೆ ಅವಕಾಶ ಸಿಕ್ಕಿದೆ. ಈ ಬಾರಿ ಪದಕ ಗೆದ್ದವರಿಗೆ ರಾಜ್ಯ ಸರಕಾರಗಳು ಉತ್ತಮ ಬಹುಮಾನವನ್ನು ಪ್ರಕಟಿಸಿವೆ. ಭಾರತಕ್ಕೆ ಹಿಂದಿನ ಬಾರಿಗಿಂತ ಟೋಕಿಯೋದಲ್ಲಿ ಹೆಚ್ಚಿನ ಪದಕ ಸಿಗಲಿದೆ ಎಂಬ ನಂಬಿಕೆ ಇದೆ,’ ಎಂದು ಆತ್ಮವಿಶ್ವಾಸದಿಂದ ನುಡಿದರು.
ದಕ್ಷಿಣ ಭಾರತದಿಂದ ಕೇವಲ ಒಬ್ಬ ಅಥ್ಲೀಟ್ ಮಾತ್ರ ಆಯ್ಕೆಯಾಗಿದ್ದಾರೆ, ತಮಿಳುನಾಡಿನ ಮಾರಿಯಪ್ಪನ್ ತಂಗವೇಲು ಆಯ್ಕೆಯಾದವರು. ಮಾರಿಯಪ್ಪನ್ ತಂಗವೇಲು, ನಿಷಾದ್ ಕುಮಾರ್, ವಿನೋದ್ ಕುಮಾರ್, ಅರವಿಂದ್, ಭಾಗ್ಯಶ್ರೀ ಜಾದವ್, ವರುಣ್ ಭಾಟಿ ಮತ್ತು ಸಂಜಯ್ ಸರ್ಕಾರ್ ಅವರಿಗೆ ಸತ್ಯನಾರಾಯಣ ತರಬೇತಿ ನೀಡಿರುತ್ತಾರೆ.
ತಂಡದ ವಿವರ:
ಪುರುಷರ ವಿಭಾಗ: ದೇವೇಂದ್ರ ಝಝಾರಿಯಾ, ಅರ್ಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಗುರ್ಜಾರ್ (ಎಲ್ಲರೂ ಎಫ್-46 ಜಾವಲಿನ್ ವಿಭಾಗ), ಸಂದೀಪ್ ಚೌಧರಿ ಮತ್ತು ಸಮಿತ್ (ಇಬ್ಬರೂ ಜಾವಲಿನ್ ಎಫ್-64 ವಿಭಾಗ), ಮಾರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ (ಇಬ್ಬರೂ ಟಿ-64 ಹೈಜಂಪ್), ಅಮಿತ್ ಕುಮಾರ್ ಮತ್ತು ಧರ್ಮವೀರ್ (ಇಬ್ಬರೂ ಕ್ಲಬ್ ಥ್ರೋ-ಎಫ್ 51 ವಿಭಾಗ), ವಿಷಾದ್ ಕುಮಾರ್ ಮತ್ತು ರಾಮ್ ಪಾಲ್ (ಇಬ್ಬರೂ ಹೈಜಂಪ್ ಟಿ-47 ವಿಭಾಗ), ಸೋನಮ್ ರಾಣಾ (ಎಫ್ 57 ಶಾಟ್ ಪಟ್), ನವದೀಪ್ (ಜಾವಲಿನ್ ಎಫ್ 41), ಪ್ರವೀಣ್ ಕುಮಾರ್ (ಹೈಜಂಪ್ ಟಿ-64), ಯೋಗೇಶ್ ಕಥೂನಿಯಾ (ಡಿಸ್ಕಸ್ ಥ್ರೋ ಎಫ್ -51 ವಿಭಾಗ), ರಂಜಿತ್ ಭಾಟಿ (ಜಾವಲಿನ್ ಎಫ್-57), ಅರವಿಂದ್ (ಶಾಟ್ ಪಟ್ ಎಫ್-35), ಟೆಕ್ ಚಾಂದ್ (ಎಫ್-54), ಮಹಿಳೆಯ ವಿಭಾಗ: ಏಕ್ತಾ ಬ್ಯಾನ್ ಮತ್ತು ಕಾಶೀಶ್ ಲಾಕ್ರಾ (ಕ್ಲಬ್ ಥ್ರೋ ಎಫ್- 51), ಭಾಗ್ಯಶ್ರೀ ಜಾಧವ್ (ಶಾಟ್ ಪಟ್ ಎಫ್-34), ಸಿಮ್ರಾನ್- (100 ಟಿ-13).




