
ಪುಟ್ಟ ಪುಟ್ಟ ಮಕ್ಕಳು ಆಟವಾಡುವುದನ್ನು ಹುಡುಗಾಟ ಎನ್ನುತ್ತೇವೆ. ಹೀಗೆ ಆಟವಾಡುವ ಹುಡುಗರು ನಿಮಿಷಕ್ಕೊಂದು ಮಾತು ಬದಲಿಸಬಹುದು, ಅಳಬಹುದು, ಅಳಿಸಬಹುದು, ನಗಬಹುದು, ಏನಾದರೂ ಮಾಡಬಹುದು.. ಏಕೆಂದರೆ ಅವರು ಹುಡುಗರು. ಅವರದ್ದು ಹುಡುಗಾಟ. ಅದಕ್ಕೆ ಕ್ಷಮೆಯಿದೆ. ಆದರೆ ಇಂದು ನಮ್ಮ ರಾಜ್ಯಸರ್ಕಾರವೂ ಇದೇ ರೀತಿಯ ಹುಡುಗಾಟವನ್ನು ಆಡುತ್ತಿದೆಯಲ್ಲ, ಅದಕ್ಕೂ ಕ್ಷಮೆಯಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಅರೆ, ರಾಜ್ಯ ಸರ್ಕಾರ ಯಾವಾಗ ಹುಡುಗಾಟ ಆಡಿದೆ ಎಂದು ನೀವು ಕೇಳುವುದಾದರೆ, ಅದನ್ನು ನಿಮಗೆ ನೆನಪಿಸಲು ನನಗೆ ತೀರ ಹಿಂದೆಯೇನೂ ಹೊಗಬೇಕಾಗಿಲ್ಲ. ನಿನ್ನೆ, ಒಂದೇ ಒಂದು ದಿನದ ಹಿಂದೆ ರಾಜ್ಯ ಸರ್ಕಾರ ಒಂದು ಆದೇಶ ಹೊರಡಿಸಿತ್ತು, ಪ್ರಾಣಿ ವಧೆಗೂ ಮುನ್ನ ಸ್ಟನ್ನಿಂಗ್ ಮಾಡಬೇಕು, ಇಲ್ಲದಿದ್ದರೆ 5ರಿಂದ 50 ಸಾವಿರ ದಂಡ ಎಂದು.
ಸರ್ಕಾರದ ಈ ಆದೇಶಕ್ಕೆ ವಿರೋಧಪಕ್ಷಗಳು ಸೇರಿದಂತೆ ಹಲವರು ಟೀಕೆಗಳ ಸುರಿಮಳೆಯನ್ನೇ ಸುರಿಸಿದರು. ಕೊಳಿಗಳಿಗೆ ಹೇಗೆ ಕರೆಂಟ್ ಹೊಡೆಸುವುದು, ಪ್ರಜ್ಷೆತಪ್ಪಿಸುವುದು ಎಂದು ಮುಂತಾಗಿ ಸರ್ಕಾರವನ್ನು ಹಲವರು ತರಾಟೆಗೆ ತೆಗೆದುಕೊಂಡರು. ಇದರ ಫಲವಾಗಿ ಸರ್ಕಾರ ಕೇವಲ 24 ಗಂಟೆಗಳಲ್ಲಿ ಯು ಟರ್ನ್ ತೆಗೆದುಕೊಂಡಿದೆ. ಪ್ರಾಣಿಗಳ ವಧೆಗೆ ಮುನ್ನ ಅವುಗಳಿಗೆ ಪ್ರಜ್ಷೆ ತಪ್ಪಿಸುವ ಸ್ಟನ್ನಿಂಗ್ ಮಾಡುವ ಆದೇಶವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ! ಇದು ಹುಡುಗಾಟವಲ್ಲದೆ ಮತ್ತೇನು? ಕೇವಲ 24 ಗಂಟೆಗಳಲ್ಲಿ ಸರ್ಕಾರ ತನ್ನ ಆದೇಶವನ್ನು ವಾಪಸ್ ತೆಗೆದುಕೊಳ್ಳುತ್ತದೆಯೆಂದರೆ, ಮೊದಲು ಈ ಆದೇಶವನ್ನು ಮಾಡಿದ್ದಾದರೂ ಏಕೆ? ಆದೇಶ ಜಾರಿಮಾಡುವ ಮುನ್ನ ಅದರ ಸಾಧಕ ಬಾಧಕಗಳನ್ನು ಸರ್ಕಾರ ಯೋಚಿಸುವುದಿಲ್ಲವೆ?
ಇದಿಷ್ಟೇ ಅಲ್ಲ, ಇಡೀ ಭಾರತದಲ್ಲೇ ಇರುವ ಹಲಾಲ್ ಕಟ್ ವಿಧಾನವನ್ನೇ ಕರ್ನಾಟಕದಲ್ಲಿ ನಿಷೇಧಿಸಲು ಸರ್ಕಾರದ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ನಿನ್ನೆ ಬಾಂಬ್ ಒಂದನ್ನು ಸಿಡಿಸಿದ್ದರು. ಹಲಾಲ್ ಕಟ್ ಎಂಬುದು ಒಂದು ಧರ್ಮದವರ ಆಸ್ಥೆ ಎಂಬುದು ಗೊತ್ತಿದ್ದರೂ ಅವರನ್ನು ಕೆರಳಿಸಲು ಅಥವ ದಮನಿಸಲು ಈ ರೀತಿಯ ಹೇಳಿಕೆಗಳನ್ನು ಕೊಡುವುದು ಹುಡುಗಾಟವಲ್ಲದೆ ಮತ್ತೇನು?
ಜಾತ್ಯಾತೀತ ದೇಶವನ್ನು ಹಿಂದೂ ದೇಶವನ್ನಾಗಿ ಮಾಡುತ್ತೇವೆ ಎಂದು ಸರ್ಕಾರದ ಒಬ್ಬ ಸಚಿವ ಹೇಳಿದರೆ, ಭಾರತದಲ್ಲಿರುವ ಎಲ್ಲ ಮುಸ್ಲಿಮರನ್ನು ಹಿಂದುಗಳಾಗಿ ಮಾರ್ಪಡಿಸುತ್ತೇವೆ, ಅಷ್ಟೇ ಅಲ್ಲ, ಪಕ್ಕದ ಪಾಕಿಸ್ತಾನವನ್ನೂ ವಶಪಡಿಸಿಕೊಂಡು ಅಲ್ಲಿರುವ ಮುಸ್ಲಿಮರನ್ನೂ ಹಿಂದೂಗಳನ್ನಾಗಿ ಮಾಡುತ್ತೇವೆ ಎಂದು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಂಥ ಉನ್ನತ ಹುದ್ದೆಯಲ್ಲಿರುವ ಸಿಟಿ ರವಿ ಹೇಳಿಕೆ ಕೊಡುತ್ತಾರೆ! ಮತ್ತೊಬ್ಬ ಬಿಜೆಪಿಯ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳುತ್ತಾರೆ, ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಬಾವುಟವನ್ನು ಹಾರಿಸುತ್ತೇವೆ! ಇವೆಲ್ಲ ಅತಿ ಗಂಭೀರವಾದ ದೇಶದ್ರೋಹದ, ಸಮಾಜದ್ರೋಹದ ದೊಡ್ಡ ಮಾತುಗಳು. ಆದರೆ ಬಿಜೆಪಿಯ ಸಚಿವರು, ಶಾಸಕರು ಈ ಮಾತುಗಳನ್ನು ಹುಡುಗರಿಗಿಂತ ಕಡೆಯದಾಗಿ ಆಡುತ್ತಿದ್ದಾರೆ.. ಅದಕ್ಕೆ ಹೇಳಿದ್ದು ಸರ್ಕಾರದ ಹುಡುಗಾಟ ಜಾರಿಯಲ್ಲಿದೆ ಎಂದು!
ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕ, BMG24x7ಲೈವ್ಕನ್ನಡ




