ಕೇರಳ ಪಾಲಾದ ʼಕೆಎಸ್ಆರ್ಟಿಸಿʼ; ಅಂಬೇಡ್ಕರ್ ಹೆಸರಿಡುವಂತೆ ಸರ್ಕಾರಕ್ಕೆ ಸುಮಲತಾ ಪತ್ರ

ಕಿರುಗುಂದ ರಫೀಕ್
ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಆಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸಾರಿಗೆ ಸಂಸ್ಥೆ ಹೆಸರಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಕೊನೆಗೆ ಕೇರಳ ರಾಜ್ಯದ ಪರವಾಗಿ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ನಿಗಮಕ್ಕೆ ಬೇರೆ ಯಾವ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಕೆಎಸ್ಆರ್ಟಿಸಿಯನ್ನು ʼಬಾಬಾಸಾಹೇಬ್ ಸಾರಿಗೆ ಸಂಸ್ಥೆʼ ಎಂದು ಬದಲಾಯಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಅವರಿಗೆ ಮನವಿ ಮಾಡಿದ್ದಾರೆ.
ಕಳೆದ 27 ವರ್ಷಗಳಿಂದ ಕೆಎಸ್ಆರ್ಟಿಸಿ ಪದ ಬಳಕೆ ಸಂಬಂಧ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಕರ್ನಾಟಕಕ್ಕೆ ಸೋಲಾಗಿದೆ. ʼಕೆಎಸ್ಆರ್ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತಾಗಿದೆ, ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆಧಾರದಲ್ಲಿ ಇದನ್ನು ಕೇರಳಕ್ಕೆ ಬಿಟ್ಟುಕೊಡಬೇಕೆಂದು ರಿಜಿಸ್ಟ್ರಿ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದೇನು ಮಾಡುವುದೆಂದು ತೀರ್ಮಾನಿಸಲಾಗುವುದು ಎಂದು ಕೆಎಸ್ಆರ್ಟಿಸಿ ಎಂ.ಡಿ. ಶಿವಯೋಗಿ ಕಳಸದ ತಿಳಿಸಿದ್ದಾರೆ.


ಹಿಂದಿನ ಹೆಸರನ್ನೇ ಉಳಿಸಿಕೊಳ್ಳುವ ಲೆಕ್ಕಾಚಾರ?
ಕೆಎಸ್ಆರ್ಟಿಸಿ ಎಂದರೆ ಇದರ ಫುಲ್ಫಾರ್ಮ್ ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್. ಇದರ ಕೊನೆಯಲ್ಲಿರುವ ʼಕಾರ್ಪೊರೇಷನ್ʼ ಅನ್ನು ತೆಗೆದುಹಾಕಿ ʼಕಂಪನಿʼ ಎಂದು ಬದಲಾಯಿಸಿದರೆ ಮತ್ತೆ ಅದೇ ಕೆಎಸ್ಆರ್ಟಿಸಿ ಪದಬಳಕೆಯನ್ನು ಮರಳಿ ಪಡೆಯಬಹುದಾಗಿದೆ. ಈ ಬಗ್ಗೆ ಮಾಜಿ ಮಂತ್ರಿ ರಾಮಲಿಂಗಾರೆಡ್ಡಿ ʼಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಂಪನಿʼ ಎಂದು ಮರುನಾಮಕರಣ ಮಾಡುವಂತೆ ಸಲಹೆ ನೀಡಿದ್ದಾರೆ.
——————
“ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಕೇರಳ ಪಾಲಾಗಿರುವುದರಿಂದ ಕರ್ನಾಟಕ ರಾಜ್ಯದ ಸಾರಿಗೆ ನಿಗಮನಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ʼಬಾಬಾಸಾಹೇಬ್ ಸಾರಿಗೆ ಸಂಸ್ಥೆʼ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರವನ್ನು ಕೋರುತ್ತೇನೆ”
– ಸುಮಲತಾ ಅಂಬರೀಶ್, ಸಂಸದೆ
—————–
“ದೇವರಾಜ ಅರಸು ಕಾಲದಲ್ಲಿ ಕೆಎಸ್ಆರ್ಟಿಸಿ ಎಂದು ಹೆಸರಿಡಲಾಗಿತ್ತು. ಆದರೆ ಕೇರಳ ರಾಜ್ಯವು ಕರ್ನಾಟಕಕ್ಕಿಂತ ಮೊದಲೇ ಹೆಸರಿಟ್ಟಿದ್ದ ಕಾರಣಕ್ಕೆ ತೀರ್ಪು ಕೇರಳದ ಪರವಾಗಿ ಬಂದಿದೆ. ಈ ವಿಚಾರವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ”
-ರಾಮಲಿಂಗಾರೆಡ್ಡಿ, ಮಾಜಿ ಸಚಿವ




