ರೈತರಿಗೆ ಉಚಿತ ಬಿತ್ತನೆ ಬೀಜ, ಗೊಬ್ಬರ; ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
ಎಂ ಹೈದರ್
ಸರ್ಕಾರ ಬಿತ್ತನೆ ಬೀಜ ಸರಬರಾಜು ಮಾಡದೆ ರೈತರಿಗೆ ತೊಂದರೆ ಮಾಡಿದೆ, ಈ ವರ್ಷದ ಬೇಡಿಕೆಗೆ ಅನುಗುಣವಾಗಿ ಬೀಜ ಸಂಗ್ರಹಿಸದೆ ಮೈಮರೆತು, ಕಳೆದ ವರ್ಷ ಬೀಜ ಪಡೆದವರಿಗೆ ಈ ವರ್ಷ ಕೊಡುವುದಿಲ್ಲ ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸಬೂಬು ಹೇಳಿ ತನ್ನ ತಪ್ಪನ್ನು ಮರೆಮಾಚಲು ಸರ್ಕಾರ ಯತ್ನಿಸಿದೆ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಅಂಬಾನಿ, ಅದಾನಿಗಳಿಗೆ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಗಳನ್ನು ಕೊಟ್ಟು ಅವರಿಗೆ ಜನರನ್ನು ಹುರಿದು ಮುಕ್ಕಲು ಬಿಟ್ಟು ಜನರ ಬಳಿ ಇರುವ ಬಿಡಿಗಾಸನ್ನು ಲೂಟಿ ಮಾಡಲು ಅವರಿಗೆ ಅವಕಾಶ ಕೊಟ್ಟು, ಹಸಿರು ಶಾಲನ್ನು ಹೆಗಲ ಮೇಲೆ ಹಾಕಿಕೊಳ್ಳುವುದು ರೈತ ಪ್ರೇಮವೇ.? ವೇಷಗಳನ್ನು ಹಾಕಿ ಘೋಷಣೆಗಳನ್ನು ಕೂಗುವುದು ದೇಶಪ್ರೇಮವೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೋವಿಡ್ ನಿಂದಾಗಿ ರೈತರ ಕೈಯಲ್ಲಿ ಹಣವಿಲ್ಲ ಹಾಗಾಗಿ ಅವರಿಗೆ ಬೀಜ, ಗೊಬ್ಬರಗಳನ್ನು ಉಚಿತವಾಗಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಸಾಲ ವಿತರಣೆ ಚಟುವಟಿಕೆ ಆರಂಭಿಸಬೇಕು, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಸಂಗ್ರಹಿಸಿ ಸಮರೋಪಾದಿಯಲ್ಲಿ ವಿತರಿಸಬೇಕು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.


ಪತ್ರ ವಿವರ:
ಕೋವಿಡ್ ನಿಂದಾಗಿ ನಗರ ಪ್ರದೇಶದಿಂದ ವ್ಯಾಪಕ ಪ್ರಮಾಣದಲ್ಲಿ ಜನರು ಹಳ್ಳಿಗಳಿಗೆ ವಾಪಸ್ಸಾಗಿದ್ದು ಇದರ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಈಗ ಹೆಚ್ಚಾಗಿದೆ.
ಸರ್ಕಾರದ ಲೆಕ್ಕದ ಪ್ರಕಾರವೇ ರಾಜ್ಯದಲ್ಲಿ 2019ನೇ ಸಾಲಿಗೆ ಹೋಲಿಸಿದರೆ 2020 ರಲ್ಲಿ ಒಂದು ಲಕ್ಷ ಎಕರೆಗಳಷ್ಟು ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿರುವುದು, ಕಂಡುಬಂದಿದೆ, ಆದರೂ ಈ ವರ್ಷ ಕೃಷಿಗೆ ಪೂರಕವಾಗಿ ಸರ್ಕಾರ ಪೂರ್ವ ತಯಾರಿ ನಡೆಸದೆ ರೈತರಿಗೆ ಅನ್ಯಾಯ ಎಸಗುತ್ತಿದೆ.
ಕೈಗಾರಿಕೆ ಮತ್ತು ಸೇವಾ ವಲಯಗಳು ಕುಸಿದು ಕುಳಿತಿರುವ ಈ ಸಂದರ್ಭದಲ್ಲಿ ಕೃಷಿ ವಲಯ ಮಾತ್ರ ಶೇ 6.1 ರಷ್ಟು ಬೆಳವಣಿಗೆಯನ್ನು ಹೊಂದಿದೆ.
ಬೀಜ ವಿತರಣೆಯಲ್ಲಿ ಕೊರತೆಗೆ ಉದಾಹರಣೆ ಎಂದರೆ, ಕಳೆದ ವರ್ಷ 8391 ಕ್ವಿಂಟಾಲ್ ಹೆಸರುಕಾಳಿನ ಬೀಜ ನೀಡಲಾಗಿತ್ತು ಆದರೆ ಈ ವರ್ಷ ಕೇವಲ 210 ಕ್ವಿಂಟಾಲ್ ನೀಡಿದೆ, ಅಂತೆಯೇ ಉದ್ದು, ಅಲಸಂದೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳನ್ನು, ಎಣ್ಣೆ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ನೀಡದೆ ಸರ್ಕಾರ ದ್ರೋಹ ಎಸಗಿದೆ. ಮುಂದಾಲೋಚನೆ ಇಲ್ಲದ, ಅವಕಾಶವಾದಿ ರಾಜಕಾರಣದಿಂದಾಗಿ ಕೃಷಿ ವಲಯವನ್ನು ಕೂಡ ಸರ್ಕಾರ ಹಾಳು ಮಾಡಲು ಹೊರಟಿದೆ.
ರೈತರಿಗೆ ಸಕಾಲದಲ್ಲಿ ಸಮರ್ಪಕ ಪ್ರಮಾಣದಲ್ಲಿ ಬಿತ್ತನೆ ಬೀಜ ದೊರೆಯದಿದ್ದರೆ ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳುತದೆ, ರೈತರು ಬೀಜ ಸಿಗದೆ ಕಳಪೆ ಬೀಜಗಳನ್ನು ಬಿತ್ತಿ ಅವರಿಗೆ ನಷ್ಟ ಉಂಟಾಗುವ ಅಪಾಯವಿದೆ, ಅಲ್ಲದೇ ಬೆಳೆಯುವ ಬೆಳೆಗಳನ್ನು ಸಮರ್ಪಕ ಪ್ರಮಾಣದಲ್ಲಿ ಬೆಳೆಯದೆ ಉತ್ಪಾದನೆ ಕಡಿಮೆಯಾಗಿ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು ಇದರಿಂದ ಆಹಾರ ಕೊರತೆ ಉಂಟಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ.




