ಭಾರತಕ್ಕೆ 100 ಕೋಟಿ ಸಾಲ ಕೇಳಿದ ಶ್ರೀಲಂಕಾ

ಶ್ರೀಲಂಕಾ: ಕೊರೋನಾ ಸಂಕ್ರಮಣದ ಎರಡು ವರ್ಷಗಳು ಶ್ರೀಲಂಕಾದ ಆರ್ಥಿಕತೆಯನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿದೆ. ದೇಶದ ಆದಾಯದ ಮುಕ್ಕಾಲು ಭಾಗ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಶ್ರೀಲಂಕಾಗೆ ಕೊರೋನ ಎಂಥ ಮರ್ಮಾಘಾತವನ್ನು ನೀಡಿದೆಯೆಂದರೆ, ಅಲ್ಲಿನ ಸರ್ಕಾರ ಹಾಗೂ ಜನ ಆರ್ಥಿಕ ಹೊಡೆತಕ್ಕೆ ಸಿಕ್ಕಿ ನಲುಗಿಹೋಗಿದ್ದಾರೆ.
ಅಗತ್ಯ ಆಹಾರ ಸಾಮಗ್ರಿಗಳ ಬೆಲೆಗಳು ಶ್ರೀಲಂಕಾದಲ್ಲಿ ಮುಗಿಲು ಮುಟ್ಟಿವೆ. ಪೆಟ್ರೋಲ್, ಡೀಸಲ್ಗಳನ್ನು ಸರಕಾರ ರೇಷನ್ ರೀತಿಯಲ್ಲಿ ಜನರಿಗೆ ಕೊಡುತ್ತಿದೆ ಹಾಗೂ ಪೆಟ್ರೋಲ್ ಪಂಪ್ಗಳಿಗೆ ಮಿಲಿಟರಿ ಭದ್ರತೆಯನ್ನು ಒದಗಿಸಿದೆಯೆಂದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂಬುದನ್ನು ಊಹಿಸಿಕೊಳ್ಳಬಹುದು.
ಈ ಕಾರಣದಿಂದಾಗಿ ಶ್ರೀಲಂಕಾ ಇದುವರೆಗೂ ಚೀನಾದಿಂದ ಹಲವು ಬಾರಿ ಸಾಲ ತೆಗೆದುಕೊಂಡಿತ್ತು. ಆದರೆ ಈಗ ಚೀನಾದಿಂದ ತೆಗೆದುಕೊಂಡಿರುವ ಸಾಲ ತೀರಿಸುವ ಸ್ಥಿತಿಯಲ್ಲಿ ಶ್ರೀಲಂಕಾ ಇಲ್ಲದಿರುವುದರಿಂದ ಹಾಗೂ ಚೀನಾ ಮತ್ತೆ ಸಾಲ ಕೊಡುವ ಸಂಭವ ಇಲ್ಲದಿರುವುದರಿಂದ ಅದು ತನ್ನ ನೆರೆಯ ದೇಶ ಭಾರತದಿಂದ ಒಂದು ಅರಬ್ ಡಾಲರ್ ಸಾಲವನ್ನು ಕೇಳಿದೆ. ಇದರಿಂದಲಾದರೂ ತನ್ನ ಆರ್ಥಿಕ ಸ್ಥಿತಿ ಹಳಿಯ ಮೇಲೆ ಬರಬಹುದು ಎಂಬುದು ಶ್ರೀಲಂಕಾ ಆಶಯ. ಆದರೆ ಭಾರತ ಶ್ರೀಲಂಕಾದ ಈ ಕೋರಿಕೆಯನ್ನು ಮನ್ನಿಸಿ ಸಾಲ ಕೊಡುವುದೇ ಎಂಬುದೇ ಈಗ ಉದ್ಭವಿಸಿರುವ ಪ್ರಶ್ನೆ. ಏಕೆಂದರೆ ಭಾರತದ ಆರ್ಥಿಕ ಪರಿಸ್ಥಿತಿಯೂ ಅಷ್ಟೇನೂ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ.




