
ನನಗೆ ಸಂಬಂಧಿಸಿದ ಒಂದೇ ಒಂದು ರೂಪಾಯಿ ಕಪ್ಪು ಹಣ ಸಿಕ್ಕರೂ ನಾನು ನನ್ನ ಸಂಪೂರ್ಣ ಆಸ್ತಿಯನ್ನು ಬಿಜೆಪಿಗೆ ದಾನ ಮಾಡುತ್ತೇನೆ ಎಂದು ಬಿಜೆಪಿ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರದ ಏಜೆನ್ಸಿಗಳು ನನ್ನ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡರೂ, ನನ್ನನ್ನು ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ. ನಾನು ನಿಜವಾದ ಶಿವ ಸೈನಿಕ ಎಂದರು. ನನ್ನ ವಿರುದ್ಧ ಯಾವುದೇ ರೀತಿಯ ಷಡ್ಯಂತ್ರ ಹೂಡಿದರೂ ನಾನು ಹೆದರುವುದಿಲ್ಲ. ಕೊನೆಗೆ ಸತ್ಯವೇ ಮೇಲುಗೈ ಸಾಧಿಸುತ್ತದೆ. ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ನನ್ನನ್ನು ಗುಂಡಿಕ್ಕಿ ಕೊಂದರು ಅಥವಾ ಜೈಲಿಗೆ ಕಳುಹಿಸಿದರೂ ನಾನು ಭಯ ಪಡುವುದಿಲ್ಲ ಎಂದರು.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂಬಂಧಿಸಿದ ಸುಮಾರು ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.




