ರಾಜ್ಯಸುದ್ದಿ

ಆನ್ ಲೈನಲ್ಲೇ ದೂರು ನೀಡಿ, ಎಫ್ಐಆರ್ ಪಡೆಯಿರಿ

ವಾಹನ ಕಳವು, ಮನೆಗಳ್ಳತನ ಹಾಗೂ ಕುಟುಂಬದ ಸದಸ್ಯರ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಲು ಸಾರ್ವಜನಿಕರು ಗಂಟೆಗಟ್ಟಲೆ ಪರದಾಡುವಂತಿಲ್ಲ. ಇನ್ನು ಮುಂದೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕುಳಿತ ಜಾಗದಿಂದಲೇ ದೂರು ಸಲ್ಲಿಸಿ ನಾಗರಿಕರು ಎಫ್ಐಆರ್ ಪ್ರತಿ ಪಡೆಯಬಹುದು.
ಅಪರಾಧ ಕೃತ್ಯಗಳ ಬಗ್ಗೆ ದೂರು ಸಲ್ಲಿಸಿ ಎಫ್ಐಆರ್ ಪ್ರತಿ ಪಡೆಯುವ ವಿನೂತನ ವ್ಯವಸ್ಥೆಯನ್ನು ಶೀಘ್ರದಲ್ಲೇ ರಾಜ್ಯ ಪೊಲೀಸ್ ಇಲಾಖೆ ಜಾರಿಗೊಳಿಸಲಿದೆ. ಈಗ ಮೊಬೈಲ್ ,ಪರ್ಸ ಹಾಗೂ ಎಟಿಎಂ ಕಳ್ಳತನದ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ವೆಬ್ ಸೈಟ್ ನಲ್ಲಿ ದೂರು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ ಆ ದೂರಿನ ಎಫ್ಐಆರ್ ಬದಲಿಗೆ ಸ್ವೀಕೃತಿ ಪತ್ರ ಮಾತ್ರವಷ್ಟೇ ಆನ್ಲೈನ್ನಲ್ಲಿ ಪಡೆಯಬಹುದು. ಹೊಸ ವ್ಯವಸ್ಥೆಯ ಪ್ರಕಾರ ದೂರು ಸಲ್ಲಿಸಿ ಎಫ್ಐಆರ್ ಪ್ರತಿ ಪಡೆಯಬಹುದಾಗಿದೆ. ಇದರಿಂದ ಜನರ ಸಮಯ ಉಳಿತಾಯವಾಗಲಿದೆ. ಪೊಲೀಸ್ ಠಾಣೆಗೆ ತೆರಳುವ ಪ್ರಮೇಯವೂ ಇರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ, ತೆಲಂಗಾಣ ಮಾದರಿ ವ್ಯವಸ್ಥೆ
ವಾಹನ ಕಳವು, ನಾಪತ್ತೆ ಸೇರಿದಂತೆ ಕೆಲವು ಅಪರಾಧ ಕೃತ್ಯದ ಸಂಬಂಧ ರಾಜ್ಯ ಪೋಲಿಸ್ ಇಲಾಖೆಯ ವೆಬ್ ಸೈಟ್ ನಲ್ಲಿ(https://ksp.karnataka.gov.in) ಸಾರ್ವಜನಿಕರು ದೂರು ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ರೀತಿ ಆನ್ಲೈನ್ ದೂರು ಸ್ವೀಕಾರ ವ್ಯವಸ್ಥೆ ದೆಹಲಿ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ಎಸ್ ಸಿ ಆರ್ ಬಿ ( ಅಪರಾಧ ದಾಖಲಾತಿ ಕೇಂದ್ರ) ಹಾಗೂ ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆನ್ ಲೈನಲ್ಲಿ ದೂರು ಸಲ್ಲಿಸುವುದು ಹೇಗೆ?
ಕೆಎಸ್ ಪಿ ವೆಬ್ ಸೈಟ್ ನಲ್ಲಿ ದೂರ ಸ್ವೀಕಾರಕ್ಕೆ ಪ್ರತ್ಯೇಕ ಲಿಂಕ್ ಇರುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ದೂರುದಾರರ ಹೆಸರು, ಮನೆ ವಿಳಾಸ, ಅಪರಾಧ ಕೃತ್ಯದ ವಿವರ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು. ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನೆಯಾಗಲಿದೆ. ಆ ಠಾಣೆಯಲ್ಲಿ ಆನ್ಲೈನ್ ದೂರಿನನ್ವಯ ಅಪರಾಧ ಕೃತ್ಯ ಆದರಿಸಿ ಎಫ್ಐಆರ್ ದಾಖಲಾಗುತ್ತದೆ. ಆ ಎಫ್ಐಆರ್ ಪ್ರತಿಯನ್ನು ಆನ್ಲೈನ್ನಲ್ಲಿ ಪಡೆಯಬಹುದು. ನಂತರ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ವಾಹನ ಕಳ್ಳತನ ಸಂಬಂಧ ಕೇಂದ್ರ ಸರ್ಕಾರದ ಪರಿವಾಹನ ಹಾಗೂ ರಾಜ್ಯ ಸಾರಿಗೆ ಇಲಾಖೆಯ ಸಾರಥಿ ವೆಬ್ ಪೋರ್ಟಲ್ ಜೊತೆ ಕೆಎಸ್ ಪಿ ವೆಬ್ ಸೈಟ್ ಅನ್ನು ಲಿಂಕ್ ಮಾಡಲಾಗುತ್ತದೆ. ವಾಹನ ಕಳ್ಳತನದ ಬಗ್ಗೆ ದೂರಿನ ಜೊತೆ ಚಾಸಿ ಹಾಗೂ ನೊಂದಣಿ ಪ್ರಮಾಣ ಪತ್ರ (ಆರ್ ಸಿ) ಸಂಖ್ಯೆಯನ್ನು ಜನರು ನಮೂದಿಸಬೇಕು ಆಗ ಸಾರಥಿ ಮತ್ತು ಪರಿವಾಹನದ ಬಗ್ಗೆ ಮಾಹಿತಿ ಸಿಗುತ್ತದೆ.ಇದರಿಂದ ಕಳ್ಳತನವಾದ ವಾಹನದ ಪತ್ತೆಗೆ ಪೋಲಿಸರಿಗೆ ಅನುಕೂಲವಾಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button