ಎಲ್ಲರಿಗೂ ಲಸಿಕೆ ಅನಗತ್ಯ ಮತ್ತು ಅಪಾಯಕಾರಿ; ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

ನವದೆಹಲಿ: ಎಲ್ಲರಿಗೂ ಲಸಿಕೆ ಎಂದು ಹೊರಟಿರುವುದೇ ಅತ್ಯಂತ ಅಪಾಯಕಾರಿ ನಡೆಯಾದೀತು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. ಆದರೆ ಸದ್ಯದ ದೇಶದ ಪರಿಸ್ಥಿತಿ ಗಮನಿಸಿದೆ ಸಾಮೂಹಿಕ, ವಿವೇಚನಾ ರಹಿತ ಮತ್ತು ಅಪೂರ್ಣ ಲಸಿಕಾ ಪ್ರಕ್ರಿಯೆಯು ಕೊರೊನಾ ರೂಪಾಂತರ ತಳಿಗಳಿಗೆ ಪ್ರಚೋದನೆ ನೀಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಏಮ್ಸ್ ವೈದ್ಯರು ಹಾಗೂ ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಸದಸ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಎಚ್ಚರಿಕೆ ನೀಡಿದೆ.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್, ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ ತಜ್ಞರು ಈ ಕುರಿತು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಾಮೂಹಿಕ ಲಸಿಕೆ ನೀಡುವ ಬದಲು ದುರ್ಬಲರಿಗೆ, ಅಪಾಯದಲ್ಲಿರುವವರಿಗೆ ಲಸಿಕೆ ನೀಡುವುದರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಸಾಂಕ್ರಾಮಿಕ ರೋಗ ವ್ಯಾಪಿಸಿರುವ ಈ ಹಂತದಲ್ಲಿ ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡುವ ಬದಲು ಸಾಂಕ್ರಾಮಿಕ ರೋಗ ದತ್ತಾಂಶಗಳನ್ನು ಅವಲೋಕಿಸಿ ಆದ್ಯತೆಯಲ್ಲಿ ಲಸಿಕೆ ನೀಡಬೇಕು. ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ನೀಡುವುದರಿಂದ ಮಾನವ ಮತ್ತು ಇನ್ನಿತರೆ ಸಂಪನ್ಮೂಲಗಳು ಏಕಾಏಕಿ ಬರಿದಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುವಜನತೆ ಹಾಗೂ ಮಕ್ಕಳಿಗೆ ಲಸಿಕೆ ನೀಡುವ ತುರ್ತು ಇಲ್ಲ. ಯೋಜಿತವಲ್ಲದ ಲಸಿಕಾ ಕಾರ್ಯಕ್ರಮ ರೂಪಾಂತರ ತಳಿಗಳನ್ನು ಉತ್ತೇಜಿಸುತ್ತದೆ. ಸಾಮೂಹಿಕ ಲಸಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸುವುದು ಕೂಡ ಕೊರೊನಾ ಹರಡುವಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಶಕ್ತಿಶಾಲಿ ಅಸ್ತ್ರವೆಂಬುದು ಸತ್ಯ. ಆದರೆ ಆ ಅಸ್ತ್ರವನ್ನು ಹೇಗೆ ಬಳಸಬೇಕು ಎಂಬುದೂ ತಿಳಿದಿರಬೇಕು. ಈ ಅಸ್ತ್ರದಿಂದ ಎಷ್ಟೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ಹಾಕಲು ಸಾಧ್ಯವಿಲ್ಲ ಎಂಬುದು ಸತ್ಯ. ಆದ್ದರಿಂದ ಆ ಪ್ರಯತ್ನವನ್ನು ಮಾಡುವ ಬದಲು ಹೆಚ್ಚು ಅವಶ್ಯಕವಿರುವವರಿಗೆ ಲಸಿಕೆ ಹಾಕಿ. ಲಭ್ಯವಿರುವ ಲಸಿಕೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರೆಡೆಗೆ ಗಮನ ನೀಡಿ ಎಂದು ಹೇಳಿದ್ದಾರೆ.
ಸದ್ಯಕ್ಕೆ ದೇಶದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ. ವಯಸ್ಸಾದವರನ್ನು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಬೇಕಿದೆ. ಹೀಗಾಗಿ ಎರಡನೇ ಅಲೆ ಕೊನೆಗೊಳ್ಳುತ್ತಿದ್ದಂತೆ ಸ್ಥಳೀಯ ಮಟ್ಟದಲ್ಲಿ ಸೆರೋ ಸರ್ವೆಗಳನ್ನು ನಡೆಸಿ ಒಂದು ಸೂಕ್ತ ಕಾರ್ಯಸೂಚಿ ತಂದರೆ ಬೇರುಮಟ್ಟದಲ್ಲೇ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂಬುದು ತಜ್ಞರ ಸಲಹೆಯಾಗಿದೆ.




