
ಮುಂಬೈ (ಮಹಾರಾಷ್ಟ್ರ): ಎರಡು ವರ್ಷಗಳ ಹಿಂದೆ ಕೊವಿಡ್ 19 ಬಂದಾಗ ಇಡೀ ಪ್ರಪಂಚವೇ ತಲ್ಲಣಿಸಿ ಹೋಗಿತ್ತು. ಅದಕ್ಕೆ ಭಾರತವೂ ಹೊರತಾಗಿರಲಿಲ್ಲ. ನಮ್ಮ ಪ್ರಧಾನಿ ಇಡೀ ಭಾರತವನ್ನೇ 40ದಿನಗಳ ಕಾಲ ಲಾಕ್ಡೌನ್ ಮಾಡಿಬಿಟ್ಟಿದ್ದರು. ಲಾಕ್ಡೌನ್ ಸಮಯದಲ್ಲಿ ಅದನ್ನು ಉಲ್ಲಂಘಿಸಿದ ಲಕ್ಷಾಂತರ ನಾಗರಿಕರ ಮೇಲೆ ಆಯಾ ರಾಜ್ಯಸರ್ಕಾರಗಳು ಪ್ರಕರಣ ದಾಖಲಿಸಿದ್ದವು. ಅದರ ಜೊತೆಗೆ ಮಾಸ್ಕ್ ಧರಿಸಿಲ್ಲದ ಕಾರಣಕ್ಕೂ ಪ್ರಕರಣಗಳು ದಾಖಲಾಗಿದ್ದವು. ಹೀಗೆ ಲಾಕ್ಡೌನ್ ಸಮಯದಲ್ಲಿ ಕೊರೋನಾಗೆ ಸಂಬಂಧಿಸಿದಂತೆ ರಾಜ್ಯ ಕೇಂದ್ರ ಸರ್ಕಾರಗಳು ಮಾಡಿದ್ದ ಕಾನೂನನ್ನು ಉಲ್ಲಂಘಿಸಿದವರ ಮೇಲೆ ಕೇಸ್ ದಾಖಲಾಗಿ ಜನರು ಕೊರೋನಾದ ಜೊತೆಗೆ ಈ ಕೇಸ್ಗಳಿಂದಲೂ ಸಹ ಹೈರಾಣಾಗಿದ್ದರು.
ಆದರೆ ಇದೀಗ ಮಹಾರಾಷ್ಟ್ರದಲ್ಲಿ ಕೊರೋನಾ ಲಾಕ್ಡೌನ್ ಕಾಲದಲ್ಲಿ ಅದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಈ ವಿಷಯವನ್ನು ಮಹಾರಾಷ್ಟ್ರದ ಗೃಹಮಂತ್ರಿ ದಿಲೀಪ್ ವಾಲ್ಸೆ ಪಾಟೀಲ್ ಮಂಗಳವಾರ ಪ್ರಕಟಿಸಿದರು.




