ಅಲೋಪತಿ ಚಿಕಿತ್ಸೆ ಪದ್ಧತಿಗೆ ರಾಮ್ದೇವ್ ಅಪಮಾನ; ವೈದ್ಯರಿಂದ ಜೂ.1ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

ಅಲೊಪಥಿ ಬಗ್ಗೆಅವಹೇಳನಕಾರಿಯಾಗಿ ರಾಮ್ದೇವ್ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯರುಗಳ ಸಂಘಟನೆಗಳ ಒಕ್ಕೂಟ ಜೂನ್ 1ರಂದು ಯೋಗ ಗುರು ರಾಮ್ ದೇವ್ ವಿರುದ್ಧ ಪ್ರತಿಭಟನೆ ನಡೆಸಿ ಕರಾಳ ದಿನ ಆಚರಿಸಲು ನಿರ್ಧರಿಸಿದೆ.
ಅಲೋಪಥಿ ಚಿಕಿತ್ಸೆ ಪಡೆದ ಸಾವಿರ ವೈದ್ಯರು ಮತ್ತು ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ ಎಂಬ ಬಾಬಾ ರಾಮ್ದೇವ್ ಹೇಳಿಕೆಯಿಂದ ಜನ ಅಲೋಪಥಿಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತ ಸಂದೇಶ ರವಾನೆಯಾಗಿ ಈಗ ಹೆಚ್ಚಿನ ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಪಿಡುಗಿನ ವಿರುದ್ದದ ಆರೋಗ್ಯ ಸಂಬಂಧಿಸಿದ ಅಲೋಪಥಿ ಚಿಕಿತ್ಸೆಯ ಕಾರ್ಯಕ್ರಮಗಳ ವೇಗ ಕಡಿಮೆಯಾಗುವ ಅಪಾಯವಿದೆ ಎಂಬ ವ್ಯಾಪಕವಾದ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯರುಗಳ ಸಂಘಟನೆಗಳ ಒಕ್ಕೂಟ ನಾಳೆ ಕರಾಳ ದಿನಾಚರಣೆಗೆ ಮುಂದಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಭಾರತೀಯ ನಿವಾಸಿ ವೈದ್ಯರ ಸಂಘಟನೆಗಳ ಒಕ್ಕೂಟ, ರಾಮ್ ಕಿಶನ ಯಾದವ್ ಅಲಿಯಾಸ್ ರಾಮ್ ದೇವ್, ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾದ ಬಳಿಕವೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಆರೋಗ್ಯ ಸೇವೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜೂನ್ 1ರಂದು ಮಂಗಳವಾರ ರಾಷ್ಟ್ರಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದೆ.
ಈ ಬಗ್ಗೆ ರಾಮ್ ಕಿಶನ್ ಯಾದವ್ ಅಲಿಯಾಸ್ ರಾಮ್ ದೇವ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಅಥವಾ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸಂಬಂಧಿತ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.





