
ಬೆಂಗಳೂರು: ಬೇಸಿಗೆಯ ಬಿಸಿಲಿನ ನಂತರ ನಗರದಲ್ಲಿ ನಿನ್ನೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿತು. ಹಲವು ಭಾಗಗಳು ಜಲಾವೃತಗೊಂಡು ಸವಾರರು ಹರಸಾಹಸಪಡುವಂತಾಯಿತು. ಚಂದ್ರಾ ಲೇಔಟ್, ಬಿಟಿಎಂ ಲೇಔಟ್, ಬನ್ನೇರುಘಟ್ಟ ರಸ್ತೆ, ಜಯಮಹಲ್ ರಸ್ತೆ ಮತ್ತು ದಕ್ಷಿಣ ಬೆಂಗಳೂರಿನ ಸುತ್ತಮುತ್ತಲಿನ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಭಾನುವಾರ ಸಂಜೆ 4-30 ರಿಂದ ಆರಂಭವಾದ ಮಳೆ ಸಂಜೆ 7 ಗಂಟೆಯವರೆಗೂ ಎಡೆಬಿಡದೆ ಸುರಿದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪಾಡು ಹೇಳತೀರದಂತಾಯಿತು. ಜೆಸಿ ರಸ್ತೆ, ಎನ್ ಆರ್ ಕಾಲೋನಿ ಮತ್ತಿತರ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಗುರುಳಿ ಬಿದಿದ್ದರಿಂದ ಜನರು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಆದರೆ, ಯಾವುದೇ ಗಾಯಾಳುಗಳ ಬಗ್ಗೆ ವರದಿಯಾಗಿಲ್ಲ.
ಇಂದು ಕೂಡಾ ವರುಣನ ಆರ್ಭಟ ಮುಂದುವರಿಕೆ: ವರುಣನ ಆರ್ಭಟ ಇಂದು ಕೂಡಾ ಮುಂದುವರೆಯುವ ಸಾಧ್ಯತೆಯಿದೆ. ಬೆಂಗಳೂರು ನಗರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದ ಹಲವೆಡೆ ವಿದ್ಯುತ್ ವ್ಯತ್ಯಯ; ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಬೆಸ್ಕಾಂ ಅಧಿಕಾರಿಗಳು ಸಮರೋಪಾದಿಯಲ್ಲಿ ತುರ್ತು ದುರಸ್ಥಿ ಕಾರ್ಯ ಕೈಗೊಂಡರು. ಚಂದಾಪುರ ವಿಭಾಗದಲ್ಲಿ 32 ಕಂಬಗಳು, ಕೆಂಗೇರಿ ವಿಭಾಗದಲ್ಲಿ ಒಂದು ಟ್ರಾನ್ಸ್ ಫರ್ಮರ್ ಧರೆಗುರುಳಿದ್ದು, ಕೆ.ಆರ್ ಪುರಂನಲ್ಲಿ 12 ಕಂಬಗಳಿಗೆ ಹಾನಿಯಾಗಿದೆ. ಬಿಎಂಟಿ ಲೇಔಟ್ ನಲ್ಲಿ ಎರಡು ವಿದ್ಯುತ್ ಕಂಬಗಳು ನೆಲಕ್ಕುರಳಿ ಬಿದ್ದಿದ್ದಾಗಿ ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಖೇಲೋ ಇಂಡಿಯಾ ಕ್ರೀಡಾಕೂಟ ನಡೆಯುತ್ತಿರುವ ಜೈನ್ ಕಾಲೇಜಿನಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಒಟ್ಟಾರೇ 160 ಮರಗಳು ಧರೆಗುರುಳಿ ಬಿದಿದ್ದು, 170 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮಿ ವೇಗದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ




