ಚಾಮುಂಡೇಶ್ವರಿ ಸರಳ ರಥೋತ್ಸವಕ್ಕೆ ಯದುವೀರ್ ಒಡೆಯರ್ ಚಾಲನೆ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವ ಬಹಳ ಸರಳವಾಗಿ ನೆರವೇರಿತು. ಕೊರೊನಾ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಸರಳ , ಸಾಂಪ್ರದಾಯಿಕ ರಥೋತ್ಸವ ಮಾಡಲಾಯಿತು.
ದೊಡ್ಡ ರಥದ ಬದಲು ಚಿಕ್ಕ ರಥದಲ್ಲಿ ಉತ್ಸವ ಮಾಡಿ ಮುಂಜಾನೆ 7.18 ರಿಂದ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ಆರಂಭವಾಯಿತು. ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರಿಂದ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಭಾಗಿಯಾಗಿದ್ದು, ತಮ್ಮ ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯದಂತೆ ಮೈಸೂರು ರಾಜವಂಶಸ್ಥ ಇಡೀ ಕುಟುಂಬ ಚಾಮುಂಡೇಶ್ವರಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಚಾಮುಂಡಿ ಬೆಟ್ಟದ ಗ್ರಾಮಸ್ಥರು ರಥೋತ್ಸವ ಕಣ್ತುಂಬಿಕೊಂಡರು. ಮುಂಜಾನೆಯಿಂದಲೇ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ರಥೋತ್ಸವಕ್ಕೂ ಮುನ್ನ ದೇವಸ್ಥಾನದ ಒಳಗೆ ಮಂಟಪೋತ್ಸವ, ವಜ್ರ, ವೈಡೂರ್ಯಗಳಿಂದ ಚಾಮುಂಡೇಶ್ವರಿ ದೇವಿಯನ್ನ ಅಲಂಕಾರ ಮಾಡಲಾಯಿತು.
ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ನೊಂದಿಗೆ ದೇವಸ್ಥಾನದ ಸುತ್ತ ರಥೋತ್ಸವ ಸಾಗಿತು. ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೊರೊನಾ ಕರಿನೆರಳು ಬೀಳದಂತೆ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ರಥೋತ್ಸವ ಜರುಗಿತು.



