
ಬೆಂಗಳೂರು: ಕೇಂದ್ರ ಬಜೆಟ್ ಮಂಡನೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನರೇಗಾ ಹಣವನ್ನು ಕಡಿಮೆ ಮಾಡಿದ್ರು. 2 ಕೋಟಿ ಉದ್ಯೋಗ ಕೊಡ್ತೇವೆ ಎಂದ್ರು ಅದನ್ನೂ 60 ಲಕ್ಷಕ್ಕೆ ಇಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹಲವು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗ್ತಿಲ್ಲ. ರೈತರಿಗೆ ಏನಾದ್ರೂ ಸಹಾಯವಾಗಿದ್ಯಾ? ಎಂದು ಪ್ರಶ್ನಿಸಿದ್ದಾರೆ.
ಸಿಮೆಂಟ್, ಕಬ್ಬಿಣದ ಬೆಲೆ ಕಡಿಮೆಯಾಗಿಲ್ಲ. ಮನೆಯನ್ನ ಎಲ್ಲಿ ಕಟ್ಟಿಕೊಳ್ಳೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಪೋರೇಟ್ ಲಾಬಿಗೆ ಮಣಿದು ಅವರಿಗೆ ಅವಕಾಶ ನೀಡಲಾಗಿದೆ. ಈ ಬಜೆಟ್ ಎಲ್ಲರ ಜೇಬನ್ನ ಪಿಕ್ ಪಾಕೆಟ್ ಮಾಡಿದೆ ಎಂದು ಟೀಕಿಸಿದ್ದಾರೆ.
ನದಿ ಜೋಡಣೆ ವಿಚಾರವಾಗಿ ಮಾತನಾಡಿದ ಅವರು, ಪೆನ್ನಾರ್ ನದಿ ಎಲ್ಲಿದೆ? ನಮ್ಮ ರಾಜ್ಯಕ್ಕೇನಾದ್ರೂ ಲಾಭವಾಗುತ್ತಾ? ಮೇಕೆದಾಟು ಯೋಜನೆಯಂತವನ್ನ ಕೊಡಲಿ. ಬಡ್ಡಿರಹಿತ ಸಾಲ ರಾಜ್ಯಕ್ಕೆ ಕೊಟ್ಟಿದ್ದಾರೆ. ಬಡ್ಡಿರಹಿತ ಸಾಲ ಜನರಿಗೆ ಕೊಡ್ತಿದ್ದಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.



