Latestಅಂಕಣಗಳು

ಭಾರತ ಕೇಳುತ್ತಿದೆ, ತಾಲಿಬಾನ್ ಬಗ್ಗೆ ಮೋದಿ ಸರ್ಕಾರದ ನಿಲುವೇನು?

ಎಂ ಹೈದರ್

ಕಾಶ್ಮೀರದ ವಿಷಯ ಎರಡು ದೇಶಗಳ ದ್ವಿಪಕ್ಷೀಯ ವಿಚಾರವಾಗಿದೆ ಅದನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ನಾವು ಅದರ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ತಾಲಿಬಾನ್ ಹೇಳಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ತಾಲಿಬಾನ್ ಬೆನ್ನಿಗೆ ನಿಂತು ಅಪಘಾನಿಸ್ತಾನವನ್ನು “ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ್” ಎಂದು ಅದರ ಹೆಸರು ಇಷ್ಟುದ್ದವಾಗಿ ಬದಲಾಗುವಲ್ಲಿ ಪಾಕಿಸ್ತಾನದ ಐಎಸ್ಐ ಪಾತ್ರ ಬಹಳ ದೊಡ್ಡದಾಗಿ ಕೆಲಸ ಮಾಡಿದೆ. 1999ರಲ್ಲಿ ಕಂದಹಾರ್ ವಿಮಾನ ಅಪಹರಣದ ಹಿಂದೆ ಐಎಸ್ಐ ಇತ್ತು ಎಂಬುವುದನ್ನು ನಾವು ಮರೆಯುವಂತಿಲ್ಲ.

ಅಸಲಿಗೆ ಅಪಘಾನಿಸ್ತಾನದಲ್ಲಿ ಇಸ್ಲಾಂನ ಕಠೋರ ಮುಖವಾಡ ಧರಿಸಿರುವ ತಾಲಿಬಾನ್ ನ ಬೆಳವಣಿಗೆಯ ಹಿಂದೆ ಐಎಸ್ಐ ಇದೆ ಎಂಬುದು ಜಗತ್ತಿಗೆ ಗೊತ್ತಿರುವ ಸಂಗತಿಯೇ ಆಗಿದೆ. ಅಲ್ಲದೆ ಈಗ ಮತ್ತಷ್ಟು ಅಪಾಯಕಾರಿಯಾಗಿ ನರಹಂತಕ ತಾಲಿಬಾನ್ ಬೆನ್ನಿಗೆ ಚೀನಾ ಮತ್ತು ರಷ್ಯಾಗಳು ನಿಂತಿವೆ. ಅವುಗಳ ಉದ್ದೇಶ ಅಪಘಾನಿಸ್ತಾನದ ಜನರಿಗೆ ನ್ಯಾಯ ಒದಗಿಸುವುದಾಗಲಿ, ಅಪಘಾನಿಸ್ತಾನವನ್ನು ಪುನರ್ನಿರ್ಮಿಸುವುದಾಗಲಿ, ಅಲ್ಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಾಗಲಿ ಅಥವಾ ಅಲ್ಲಿ ಮಾನವ ಹಕ್ಕುಗಳನ್ನು ಕಾಪಾಡುವುದಾಗಲಿ ಅಲ್ಲ.

ವಾಸ್ತವವಾಗಿ, ಅಪಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯನ್ನು ಸ್ಥಾಪಿಸಿರುವ ಅವರೆಲ್ಲರ ಏಕಮಾತ್ರ ಉದ್ದೇಶ ಅಲ್ಲಿನ ಖನಿಜ ಸಂಪತ್ತುಗಳನ್ನು ಲೂಠಿ ಹೊಡೆಯುವುದು, ತಮ್ಮಲ್ಲಿನ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು. ನೇಪಥ್ಯಕ್ಕೆ ಸರಿಯುತ್ತಿರುವ ಅಮೆರಿಕದ ಸ್ಥಾನವನ್ನು ತಮ್ಮನ್ನದಾಗಿಸಿಕೊಳ್ಳಲು, ಜಗತ್ತಿನ ಮೇಲೆ ಆಧಿಪತ್ಯ ಸ್ಥಾಪಿಸಲು ಚೀನಾ ಮತ್ತು ರಷ್ಯಾ ಇಂತಹ ಕ್ಷುಲ್ಲಕ ಆಟಗಳಲ್ಲಿ ತೊಡಗಿವೆ.

ಆದರೆ ದಿಗಿಲು ಉಂಟುಮಾಡುವ ವಿಚಾರವೆಂದರೆ ಸರ್ಕಾರದ ಪರವಾಗಿ ಮಾತನಾಡುತ್ತಿರುವ ಭಾರತದ ಮೀಡಿಯಾಗಳಿಗೆ ಅಸಲಿ ಸತ್ಯಗಳು ಬೇಕಾಗಿಲ್ಲ. ದೇಶದ ಹಿತಾಸಕ್ತಿಯನ್ನು ಕೂಡ ಮರೆತು ಮೋದಿ ಮಾನ ಕಾಪಾಡಲು ಟೊಂಕ ಕಟ್ಟಿ ನಿಂತಿವೆ.

ದೇಶದಲ್ಲಿ ದಿನನಿತ್ಯ ದಲಿತರ ಮತ್ತು ಅಸಹಾಯಕರ ಮೇಲಿನ ಹಲ್ಲೆ ಅತ್ಯಾಚಾರಗಳು ಮುಸ್ಲಿಮರ ಮೇಲಿನ ಗುಂಪು ದಾಳಿಗಳು ಹಿಂಸಾಚಾರಗಳು ನಡೆಯುತ್ತಿದ್ದರೂ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸುವ ಪ್ರಭುತ್ವದ ಮಡಿಲಿನ ಮಾಧ್ಯಮಗಳಿಗೆ (ಗೋದಿ ಮೀಡಿಯಾ) ತಾಲಿಬಾನ್ ಬಗ್ಗೆ ಚರ್ಚಿಸುವ ನೈತಿಕತೆ ಇದೆಯೇ?

ಅಫ್ಘಾನಿಸ್ತಾನದ ಬೆಳವಣಿಗೆ ಮತ್ತು ತಾಲಿಬಾನ್ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ಚರ್ಚಿಸಬೇಕಾದ ರಾಷ್ಟ್ರೀಯ ಮಾಧ್ಯಮಗಳು ಇದಕ್ಕೆ ಸಂಬಂಧವೇ ಇಲ್ಲದೆ ಬೀದಿಯಲ್ಲಿ ತಲೆ ಕೆರೆದುಕೊಂಡು ನಿಂತಿರುವ ಅಬ್ದುಲ್ಲಾ, ಮುನಾವರ್ ಎಂಬಂಥ ಹೆಸರುಗಳಿರುವ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗಿ ಅವರ ಮುಖಕ್ಕೆ ಮೈಕ್ ಹಿಡಿದು ಕೇಳುತ್ತಿವೆ, ತಾಲಿಬಾನ್ ಬಗ್ಗೆ ನಿಮ್ಮ ನಿಲುವೇನು ಎಂದು. ಈ ರೀತಿಯಾಗಿ ದೇಶದಲ್ಲಿ ಗೊಂದಲ ಸೃಷ್ಟಿಸಿ ಮೋದಿ ಸರ್ಕಾರವನ್ನು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮೊದಮೊದಲು ಕೊರೊನಾದ ಬಗ್ಗೆ ಪ್ರಚಾರ ಮಾಡಿದಂತೆ ಇದನ್ನು ಈ ದೇಶದ ಮುಸ್ಲಿಮರ ತಲೆಗೆ ಕಟ್ಟಲು ಇನ್ನಿಲ್ಲದ ಹರಸಾಹಸ ಪಡುತ್ತಿವೆ.

ಇಪ್ಪತೈದು ವರ್ಷಗಳ ಹಿಂದೆ ಅಪಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡಾಗ ಎಚ್ ಡಿ. ದೇವೆಗೌಡ ನೇತೃತ್ವದ ಆಗಿನ ತೃತೀಯ ರಂಗ ಸರ್ಕಾರ ಅಪಘಾನಿಸ್ತಾನದಲ್ಲಿ ಅಧಿಕಾರ ಹಿಡಿದ ತಾಲಿಬಾನ್ ಜೊತೆಗಿನ ಎಲ್ಲ ರೀತಿಯ ಸಂಬಂಧಗಳಿಗೂ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಇಡೀ ಭಾರತ ಕೇಳುತ್ತಿದೆ, ತಾಲಿಬಾನ್ ಬಗ್ಗೆ ಕೇಂದ್ರದ ಮೋದಿ ಸರ್ಕಾರದ ನಿಲುವೇನು?

Spread the love

Related Articles

Leave a Reply

Your email address will not be published. Required fields are marked *

Back to top button