
ಲಖ್ನೋ: ಉತ್ತರ ಪ್ರದೇಶದ 10 ಜಿಲ್ಲೆಗಳ 57 ಕ್ಷೇತ್ರಗಳಲ್ಲಿ ಗುರುವಾರ 6 ನೇ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆವರೆಗೆ ಶೇ.21.79ರಷ್ಟು ಮತದಾನವಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನ ಅಜಯ್ ಕುಮಾರ್ ಲಲ್ಲು ಮತ್ತು ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರ ಭವಿಷ್ಯ ನಿರ್ಧಾರವಾಗಲಿದೆ. ಮಾ.7 ರಂದು ಅಂತಿಮ ಹಂತದ ಮತದಾನ ನಡೆಯಲಿದೆ.
ಅಂಬೇಡ್ಕರ್ ನಗರ, ಬಲರಾಂಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್ ಗಂಜ್, ಗೋರಖ್ ಪುರ, ಖುಷಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಗುರುವಾರ ಮತದಾನ ನಡೆಯುತ್ತಿದೆ.
ಈ ಬಾರಿ ಕಣದಲ್ಲಿರುವ 676 ಅಭ್ಯರ್ಥಿಗಳ ಪೈಕಿ ಗೋರಖ್ ಪುರ ನಗರದಿಂದ ಯೋಗಿ ಆದಿತ್ಯನಾಥ್ ತಮ್ಮ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಲಲ್ಲು ತಮ್ಕುಹಿ ರಾಜ್ ಕ್ಷೇತ್ರದಿಂದ ಮತ್ತು ಬಿಜೆಪಿ ಸಚಿವ ಸ್ಥಾನ ತ್ಯಜಿಸಿ ಎಸ್ ಪಿ ಸೇರಿದ ಸ್ವಾಮಿ ಪ್ರಸಾದ್ ಮೌರ್ಯ ಫಾಜಿಲ್ ನಗರದಿಂದ ಸ್ಪರ್ಧಿಸಿದ್ದಾರೆ.
ಈ 57 ವಿಧಾನಸಭೆ ಕ್ಷೇತ್ರಳ ಪೈಕಿ 11 ಕ್ಷೇತ್ರಗಳು ಬಿಜೆಪಿಗೆ ನಿರ್ಣಯಕವಾಗಿವೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಈ ಪೈಕಿ 46 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
